ಒಳಮೀಸಲಾತಿ ಹಲವು ಜಾತಿಗಳಿಗೆ ಮರಣ ಶಾಸನ

KannadaprabhaNewsNetwork |  
Published : Apr 04, 2026, 01:30 AM IST
ಗುಲಗಂಜಿಹಟ್ಟಿ ಗ್ರಾಮದಲ್ಲಿ 1.50 ಕೋಟಿ ರೂ.ವೆಚ್ಚದ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿ ಪೂಜೆ. | Kannada Prabha

ಸಾರಾಂಶ

ಗುಲಗಂಜಿಹಟ್ಟಿ ಗ್ರಾಮದಲ್ಲಿ 1.50 ಕೋಟಿ ರು. ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಸರ್ಕಾರವು ಒತ್ತಡಕ್ಕೆ ಮಣಿದು ಒಳಮೀಸಲಾತಿಯನ್ನು ಜಾರಿಗೊಳಿಸಿದರೆ ಅದು ಹಲವು ಜಾತಿಯ ಸಮುದಾಯಗಳಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ತಾಲೂಕಿನ ಗುಲಗಂಜಿಹಟ್ಟಿ ಗ್ರಾಮದಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಒಳಮೀಸಲಾತಿ ಕುರಿತ ವರದಿಯು ಪಿತೂರಿಗಳಿಂದ ಕೂಡಿದೆ. ಅದು ಜಾರಿಗೆ ಬಂದರೆ ಹಲವು ಸಮುದಾಯಗಳು ತಮಗಿರುವ ಮೀಸಲಾತಿಯ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಹಲವು ಜಾತಿಯೊಳಗಿನ ವಿದ್ಯಾವಂತ ಯುವಕರು ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು.

ಈಗಿರುವ ಮೀಸಲಾತಿ ನಿಯಮದಡಿಯಲ್ಲಿ ಪ್ರವೇಶ, ವಿದ್ಯಾರ್ಥಿವೇತನ, ಹುದ್ದೆಗಳನ್ನು ಪಡೆಯುತ್ತಿರುವ ಯುವಕರು ಒಳಮೀಸಲಾತಿ ಜಾರಿಯಾದರೆ ಅವುಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.

ರೋಸ್ಟರ್ ಬಿಂಧುವಿನಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ 56,432 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಂತೆ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳು ಕಳೆದ ತಿಂಗಳು 24 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ನಡೆಸಿದ್ದಾರೆ ಎಂದು ಶಾಸಕರು ಹೇಳಿದರು.

ಈ ಕ್ಷೇತ್ರದಲ್ಲಿ ಜನರ ಮತಗಳನ್ನು ಪಡೆದು ಸಚಿವರಾದವರು ಏನು ಮಾಡಿದರು ಎಂಬುದು ನಿಮಗೆ ತಿಳಿದಿರಲಿ. ಅವರ ಹೋರಾಟ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು. ಯಾವುದೇ ಒಂದು ಜಾತಿಯ ಪರವಾಗಿ ನಿಲ್ಲದೆ ಎಲ್ಲರನ್ನು ಸಹಮತದಿಂದ ಅಭಿವೃದ್ಧಿಯ ಕಡೆಗೆ ಕರೆದೊಯ್ಯುತ್ತಿರುವ, ನಿಮ್ಮ ಕಷ್ಟ ಸುಖಗಳಿಗೆ ಭಾಗಿಯಾಗುತ್ತಿರುವ ಹಾಗೂ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದೇನೆ.

ಕ್ಷೇತ್ರದ 493 ಹಳ್ಳಿ ಜನರು ನನ್ನ ಕುಟುಂಬದರೆಂದು ಭಾವಿಸಿದ್ದೇನೆ. ಎಲ್ಲಾ ಜಾತಿಯಲ್ಲಿಯೂ ಬಡವರಿದ್ದಾರೆ. ಹಾಗಾಗಿ ಒಳ ಮೀಸಲಾತಿ ಜಾರಿಯಾದರೆ ವಿದ್ಯಾರ್ಥಿ ವೇತನ, ಉದ್ಯೋಗದಿಂದ ನಿಮ್ಮ ಮಕ್ಕಳು ವಂಚಿತರಾಗುತ್ತಾರೆ. ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೀಟು ಸಿಗುವುದು ಕಷ್ಟವಾಗುತ್ತದೆ. ಮಾನವೀಯತೆ, ಮನುಷ್ಯತ್ವ, ಜವಾಬ್ದಾರಿಯಿಟ್ಟುಕೊಂಡು ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ರಾಜಕಾರಣಿಯಾಗಿರುವುದರಿಂದ ಐದನೆ ಸಾರಿ ಶಾಸಕನಾಗಿದ್ದೇನೆ. ಜಾತಿಯ ವ್ಯತ್ಯಾಸ ನೋಡದೆ ಎಲ್ಲಾ ಜಾತಿಯವರು ನನ್ನವರೆಂದು ತಿಳಿದು ಸಾಮಾಜಿಕ ನ್ಯಾಯ ಕೊಡಬೇಕೆಂಬ ಆಲೋಚನೆಯಿಟ್ಟುಕೊಂಡು ತಾಲ್ಲೂಕಿನಾದ್ಯಂತ, ಗುಣಮಟ್ಟದ ರಸ್ತೆ, ಆಸ್ಪತ್ರೆ, ಶಾಲಾ-ಕಾಲೇಜು, ವಿದ್ಯುತ್, ನೀರು, ದೇವಸ್ಥಾನಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆಂದು ಹೇಳಿದರು.

ರುದ್ರೇಗೌಡ್ರು, ಡಿ.ಸಿ.ಮೋಹನ್, ಚಂದ್ರನಾಯ್ಕ, ಶೇಖರ್‌ ನಾಯ್ಕ, ಗೋವಿಂದಾನಾಯ್ಕ, ದೇವಣ್ಣ, ರಮೇಶ್, ವೆಂಕಟೇಶ್‍ ನಾಯ್ಕ, ಕೃಷ್ಣನಾಯ್ಕ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಮರ್ಥ್ ಶಾಮನೂರು
ಜನಪರ ಯೋಜನೆ ಜಾರಿಗೆ ತರುವಲ್ಲಿ ಕಾಂಗ್ರೆಸ್‌ ಸರ್ಕಾರ ಯಶಸ್ವಿ: ಡಾ.ಪ್ರಭಾ