ಹುಬ್ಬಳ್ಳಿ:
ಮೂಲತಃ ಹುಬ್ಬಳ್ಳಿಯವರಾದ ಸದ್ಯ ಬೆಂಗಳೂರಿನಲ್ಲಿ ಬೋಶ್ ಕಂಪನಿಯಲ್ಲಿ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜಿಸ್‌ನಲ್ಲಿ ಉನ್ನತ ಅಧಿಕಾರಿಯಾಗಿರುವ ಪದ್ಮಿನಿ ಎಸ್. ನವಲಗುಂದ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆಟೋಮೋಟಿವ್ ವಿಮೆನ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ.ಅಮೆರಿಕಾದ ಡೆಟ್ರಾಯಿಟ್‌ನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿರುವ ಭಾರತದ ಪ್ರಥಮ ಮಹಿಳೆ ಎಂಬ ಖ್ಯಾತಿಗೆ ಪದ್ಮನಿ ಭಾಜನರಾಗಿದ್ದಾರೆ.
ಪದ್ಮನಿ ಅವರು ಕಳೆದ 23 ವರ್ಷಗಳಿಂದ ಬೋಶ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜಿಸ್‌ನಲ್ಲಿ ಉತ್ಪನ್ನ ಗುಣಮಟ್ಟ ನಿಯಂತ್ರಣ ಅಧಿಕಾರಿ ಎಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಗಳಿಸಿ ಪಾಸಾಗಿದ್ದಾರೆ. ಅವರು ಸದ್ಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕ್ಯಾಂಪಸ್ ರಾಯಬಾರಿ ಆಗಿದ್ದು, ಸಂಸ್ಥೆಯ ಸ್ಕೂಲ್ ಆಫ್ ಇಲೆಕ್ಟ್ರಾನಿಕ್ಸ್‌ನ ಅಧ್ಯಯನ ಮಂಡಳಿ ಸದಸ್ಯರಾಗಿದ್ದಾರೆ. ಅಟೋಮೋಟಿವ್ ಕ್ಷೇತ್ರದಲ್ಲಿನ ಅವರ ಅಸಾಧಾರಣ ಸಾಧನೆ, ಪ್ರತಿಭೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ಈ ಕಾರ್ಯಕ್ರಮದಲ್ಲಿ ಫೋರ್ಡ್, ಬೆಂಜ್, ಟೊಯೋಟಾ ಸೇರಿದಂತೆ ಹಲವಾರು ಪ್ರಖ್ಯಾತ ಮೋಟಾರು ವಾಹನ ಉದ್ಯಮಿಗಳು, ಕಂಪನಿಗಳ ಸಿಇಒಗಳು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪದ್ಮನಿ ಅವರು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಭಾರತೀಯ ಮಹಿಳಾ ನೆಟ್‌ವರ್ಕ್- ಕರ್ನಾಟಕ (ಐಡಬ್ಲ್ಯುಎನ್) ಇದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಅಟೋಮೋಟಿವ್ ಕ್ಷೇತ್ರದಲ್ಲಿನ ಅವರ ಸಾಧನೆ, ಸಂಶೋಧನೆ, ಮಹಿಳಾ ನಾಯಕತ್ವವನ್ನು ಗುರುತಿಸಿ ಈ ಹುದ್ದೆ ನೀಡಲಾಗಿದೆ.ಅವರ ತಂದೆ ಎಸ್.ಬಿ. ನವಲಗುಂದ ಅವರು ರಾಜೀವ್ ಗಾಂಧಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ವರೆಗೆ ಐದು ಪ್ರಧಾನ ಮಂತ್ರಿಗಳ ಭದ್ರತೆಯ ಜವಾಬ್ದಾರಿ ಹೊತ್ತಿದ್ದ ಎಸ್ಪಿಜಿ ತಂಡದಲ್ಲಿದ್ದರು. ಅವರ ಸಹೋದರ ಕರ್ನಲ್ ಪ್ರದೀಪ್ ನವಲಗುಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.