ಧಾರವಾಡ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ. ಅಂತೆಯೇ ರಾಜ್ಯ ಸರ್ಕಾರವು ಅತ್ಯಂತ ವಿಶಿಷ್ಟ ಮತ್ತು ಪರಿಣಾಮಕಾರಿಯಾಗಿ ಆಚರಿಸಲು ನಿರ್ದೇಶಿಸಿದ್ದು, ಅಂದು ಜಿಲ್ಲೆಯಲ್ಲಿ ತೇಗೂರ ಗ್ರಾಮದಿಂದ ಮಾವಿನಕೊಪ್ಪ ಗ್ರಾಮದ ವರೆಗೆ ಸುಮಾರು 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಮಾನವ ಸರಪಳಿ ರೂಪುರೇಷಗಳನ್ನು ಸಿದ್ಧಪಡಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಒಂಬತ್ತು ಗ್ರಾಪಂಗಳ 18 ಗ್ರಾಮಗಳಲ್ಲಿ ಮತ್ತು ಧಾರವಾಡ ನಗರದಲ್ಲಿ ಮಾನವ ಸರಪಳಿ ಮಾಡಲಾಗುತ್ತಿದೆ. ಮಾನವ ಸರಪಳಿಯಲ್ಲಿ ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್ಸ್, ಹೋಮ್ ಗಾಡ್ಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಮುಖಂಡರು, ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಒಟ್ಟು ₹55 ಸಾವಿರ ಜನರು ಭಾಗವಹಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಅಂದು ಬೆಳಗ್ಗೆ 8.30ರಿಂದ 8.40ರ ವರೆಗೆ ಮಾನವ ಸರಪಳಿ ಚಿತ್ರೀಕರಣ ಮಾಡಲಾಗುತ್ತದೆ. ಬೆಳಗ್ಗೆ 8.45ಕ್ಕೆ ಮಾನವ ಸರಪಳಿಯಲ್ಲಿ ಪಾಲ್ಗೊಂಡ ಸರ್ವರಿಂದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಜರುಗಲಿದೆ. 9ರ ಸುಮಾರಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದರು.ಜಿಲ್ಲೆಯ 55 ಕಿಮೀ ಉದ್ದದ ಮಾನವ ಸರಪಳಿಯಲ್ಲಿ ಭಾಗವಹಿಸುವ 55 ಸಾವಿರ ಜನರ ಶಿಸ್ತುಬದ್ಧ ಭಾಗವಹಿಸುವಿಕೆಗೆ ಮೇಲುಸ್ತುವಾರಿಗಾಗಿ ಪ್ರತಿ 100 ಮೀಟರ್‌ಗೆ ಒಬ್ಬ ವಿಭಾಗ ಅಧಿಕಾರಿಯಂತೆ ಒಟ್ಟು 510 ಅಧಿಕಾರಿಗಳು, ಪ್ರತಿ ಕಿಲೋಮೀಟರ್‌ಗೆ ಒಬ್ಬ ಪ್ರದೇಶ ಅಧಿಕಾರಿಯಂತೆ ಒಟ್ಟು 51 ಅಧಿಕಾರಿಗಳು, ಪ್ರತಿ ಎರಡು ಕಿ.ಮೀ.ಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯಂತೆ ಒಟ್ಟು 26 ಅಧಿಕಾರಿಗಳು ಮತ್ತು ಪ್ರತಿ ಐದು ಕಿ.ಮೀ.ಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯಂತೆ ಒಟ್ಟು 12 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ದಿವ್ಯಪ್ರಭು ತಿಳಿಸಿದರು.
ಮಾರ್ಗವಿದು:ಸೆ. 15ರಂದು ಬೆಳಗ್ಗೆ 8ಕ್ಕೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕು ಮೂಲಕ ಹಾಗೂ ಧಾರವಾಡ ಜಿಲ್ಲೆಯ ತೇಗೂರು ಗ್ರಾಮದ ಮೂಲಕ ಮಾನವ ಸರಪಳಿ ಆರಂಭವಾಗುತ್ತದೆ. ತೇಗೂರಿನಿಂದ ಗುಳೇದಕೊಪ್ಪ, ವೆಂಕಟಾಪುರ, ಶಿಂಗನಹಳ್ಳಿ, ಕೋಟೂರ, ಬೇಲೂರ ಗ್ರಾಮ, ಮಮ್ಮಿಗಟ್ಟಿ, ನರೇಂದ್ರ, ಜುಬ್ಲಿ ಸರ್ಕಲ್, ಸಲಕಿನಕೊಪ್ಪ, ಬಾಡ, ಬೆನಕನಕಟ್ಟಿ, ನಿಗದಿ, ಬೋಮ್ಮರಸಿಕೊಪ್ಪ, ಮುರಕಟ್ಟಿ, ಹಳ್ಳಿಗೇರಿ, ಹೊಲ್ತಿಕೋಟಿ ಗ್ರಾಮದಿಂದ ಮಾವಿನಕೊಪ್ಪ ಗ್ರಾಮದಿಂದ ಹಳಿಯಾಳ ತಾಲೂಕು ಮೂಲಕ ಮಾನವ ಸರಪಳಿ ಉತ್ತರ ಕನ್ನಡ ಜಿಲ್ಲೆಯನ್ನು ಸೇರುತ್ತದೆ. ಇದೊಂದು ಮಹತ್ವದ ಕಾರ್ಯಕ್ರಮ, ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಜಿಲ್ಲಾಡಳಿತ ಸಿದ್ಧಪಡಿಸಿರುವ ರೂಪುರೇಷೆ ಪ್ರಕಾರ ನೇಮಕಗೊಂಡಿರುವ ಅಧಿಕಾರಿಗಳು ಮತ್ತು ಇಲಾಖೆಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ ಸಭೆ ನಿರ್ವಹಿಸಿದರು. ಸಭೆಯಲ್ಲಿ ಕವಿವಿ ಕುಲಸಚಿವ ಎ. ಚನ್ನಪ್ಪ, ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ತಿಮ್ಮಪ್ಪ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಕುಮಾರ ಬೆಕ್ಕೇರಿ, ತಹಸೀಲ್ದಾರ್ ಡಿ.ಎಚ್. ಹೂಗಾರ ಇದ್ದರು.