ರೈತರಿಗೆ ಸರ್ಕಾರ ಕೂಡಲೇ ಬೆಳೆಹಾನಿ ಪರಿಹಾರ ನೀಡಲಿ

KannadaprabhaNewsNetwork |  
Published : Sep 06, 2024, 01:01 AM IST
ಶಿಗ್ಗಾಂವಿ, ಸವಣೂರು ಭಾಗದ ರೈತರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸವಣೂರು ತಾಲೂಕುಗಳ ರೈತರಿಗೆ ಬೆಳೆನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಗುರುವಾರ ಶಿಗ್ಗಾಂವಿ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಶಿಗ್ಗಾಂವಿ:ಸವಣೂರು ತಾಲೂಕುಗಳ ರೈತರಿಗೆ ಬೆಳೆನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಗುರುವಾರ ಶಿಗ್ಗಾಂವಿ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಶಿಗ್ಗಾಂವಿ, ಸವಣೂರು ಭಾಗದ ರೈತರಿಗೆ ಈ ಸಾಲಿನಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆನಷ್ಟ, ಹಿಂದಿನ ಸಾಲಿನ ಬರ ಪರಿಹಾರ ಹಾಗೂ ರೈತರನ್ನು ಕಾಡುತ್ತಿರುವ ಇತರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರವಿ ಕೃಷ್ಣರೆಡ್ಡಿ ಮಾತನಾಡಿ, ಪ್ರಸಕ್ತ ವರ್ಷ ಹೆಚ್ಚಿನ ಮಳೆಯಿಂದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಸವಣೂರು ತಾಲೂಕುಗಳಲ್ಲಿ ಬೆಳೆನಷ್ಟವಾಗಿದೆ. ಮೆಕ್ಕೆಜೋಳ, ಸೋಯಾಬೀನ್, ಹತ್ತಿ ಮತ್ತಿತರ ಬೆಳೆಗಳು ಹಾಳಾಗಿವೆ. ಕೆಲವೆಡೆ ಇಳುವರಿ ಗಣನೀಯವಾಗಿ ಕುಂಠಿತವಾಗಿದೆ. ಕಳೆದ ವರ್ಷ ಮಳೆ ಬರದ ಕಾರಣ ಬೆಳೆ ನಷ್ಟವಾಗಿತ್ತು. ಆಗ ಬೆಳೆ ವಿಮೆ ಪರಿಹಾರ ಬರಲಿಲ್ಲ. ಈ ಬಾರಿ ಮಳೆಯ ಕಾರಣ ಬೆಳೆ ನಾಶವಾಗಿದೆ. ಸರ್ಕಾರ ಇಲ್ಲಿಯವರೆಗೂ ಸಮೀಕ್ಷೆ ನಡೆಸಿಲ್ಲ. ರೈತರ ಬದುಕು ದುಸ್ತರವಾಗಿದೆ ಎಂದು ಹೇಳಿದರು.

ರೈತರು ಹಿಂಗಾರು ಬೆಳೆ ಸಹ ಬೆಳೆಯಲು ಸಾಧ್ಯವಾಗದಂತಹ ಸ್ಥಿತಿಯಿದೆ. ಯಾವುದೇ ದಾರಿ ಕಾಣದೆ ರೈತರು ಕಂಗಾಲಾಗಿದ್ದಾರೆ. ಅವೈಜ್ಞಾನಿಕ ಮತ್ತು ಕಾರ್ಯಸಾಧುವಲ್ಲದ ನಿಯಮಗಳಿಂದ ಬೆಳೆವಿಮೆ ಯೋಜನೆ ರೈತರ ನೆರವಿಗೆ ಬರುತ್ತಿಲ್ಲ. ವಿಮೆ ಪರಿಹಾರಕ್ಕೆ ಅರ್ಹರಿದ್ದರೂ, ಲಂಚ ನೀಡದಿರುವ ಕಾರಣ ಫಲಾನುಭವಿಗಳಿಗೆ ವಿಮೆ ಹಾಣ ಪಾವತಿಯಾಗಿಲ್ಲ. ಸಮೀಕ್ಷೆ ನಡೆಸಿದ ತಂಡಕ್ಕೆ ಯಾರು ಲಂಚ ನೀಡಿದ್ದಾರೊ ಅವರಿಗೆ ಮಾತ್ರ ವಿಮೆ ಹಣ ಪಾವತಿಯಾಗಿದೆ ಎಂದು ಆರೋಪಿಸಿದರು.ಹಲವಾರು ಹಳ್ಳಿಗಳಲ್ಲಿ ಮನೆ ಕುಸಿತವಾಗಿದೆ. ಕೆಲವರು ನೆಲೆ ಕಳೆದುಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಒದಗಿಸಿಲ್ಲ. ಇದರ ಜತೆಗೆ ಸಾಲದ ಸಮಸ್ಯೆ. ಸಾಲ ವಸೂಲಾತಿಗಾಗಿ ಬ್ಯಾಂಕ್‌ನವರ ಉಪಟಳ ಹೆಚ್ಚಾಗಿದೆ. ರೈತರು ಬೀದಿಗೆ ಬೀಳುವ ಮತ್ತು ಗುಳೆ ಹೋಗುವ ಹಂತಕ್ಕೆ ತಲುಪಿದ್ದಾರೆ ಎಂದು ಹೇಳಿದರು.

ಕೆಆರ್‌ಎಸ್ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್. ಮಾತನಾಡಿ, ರಾಜ್ಯ ಸರ್ಕಾರಕ್ಕೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ತಪ್ಪಿದ್ದು, ವಿವೇಚನಾರಹಿತವಾಗಿ ವರ್ತಿಸುತ್ತಿದೆ. ಪ್ರಸ್ತುತ ಕಾಂಗ್ರೆಸ್ ಕೇವಲ ತನ್ನ ಗ್ಯಾರಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಅದರ ಬಗ್ಗೆ ಪ್ರಚಾರ ಮಾಡುವುದೇ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಆದರೆ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯಿಲ್ಲದೆ ಸೌಲಭ್ಯಗಳಿಂದ ವಂಚಿತವಾಗಿವೆ. ರೈತರು ತಮ್ಮ ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ ಮತ್ತು ಲಂಚ ನೀಡದೆ ಯಾವುದೇ ಕೆಲಸಗಳು ಆಗುವುದಿಲ್ಲ. ಸರ್ಕಾರ, ಹಗರಣಗಳ ಮೇಲೆ ಹಗರಣ ನಡೆಸಿ, ಅವನ್ನು ಸಂಭಾಳಿಸುವುದು ಮತ್ತು ಖುರ್ಚಿ ಉಳಿಸಿಕೊಳ್ಳುವುದರಲ್ಲಿ ನಿರತವಾಗಿದೆ. ಇನ್ನೂ ವಿರೋಧ ಪಕ್ಷಗಳು ಈ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ. ಆದ್ದರಿಂದ ಈ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ನಾಡಿದ್ದಿನಿಂದ ನೀವೂ ರಾಜಭವನ ವೀಕ್ಷಿಸಿ : ಉಚಿತ ಪ್ರವೇಶ
17ರಂದು ಬಿಜೆಪಿ ಮುಖಂಡರ ಜತೆ ಧರ್ಮಸ್ಥಳ ಭೇಟಿ: ಬಿವೈವಿ