ಅಂತಾರಾಷ್ಟ್ರೀಯ ‘ಗ್ರೀನ್ ಆಸ್ಕರ್’ ಸೆಲ್ಕೋ ಮಡಿಲಿಗೆ : ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಸಂದ ದೊಡ್ಡ ಗೌರವ

KannadaprabhaNewsNetwork |  
Published : Jun 14, 2025, 03:08 AM ISTUpdated : Jun 14, 2025, 10:56 AM IST
12ಆಶ್ಡೆನ್ | Kannada Prabha

ಸಾರಾಂಶ

ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ‘ಆಶ್ಡೆನ್ ಪ್ರಶಸ್ತಿ’ಯ ಗೌರವ ಸಂದಿದೆ. ‘ಗ್ರೀನ್ ಆಸ್ಕರ್’ ಎಂದೇ ಕರೆಯಲಾಗುವ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಸೆಲ್ಕೋಗೆ 3ನೇ ಬಾರಿ ಲಭಿಸಿದಂತಾಗಿದೆ.

 ಮಣಿಪಾಲ :  ಇಲ್ಲಿನ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ‘ಆಶ್ಡೆನ್ ಪ್ರಶಸ್ತಿ’ಯ ಗೌರವ ಸಂದಿದೆ. ‘ಗ್ರೀನ್ ಆಸ್ಕರ್’ ಎಂದೇ ಕರೆಯಲಾಗುವ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಸೆಲ್ಕೋಗೆ 3ನೇ ಬಾರಿ ಲಭಿಸಿದಂತಾಗಿದೆ.ಇದು 25ನೇ ವರ್ಷದ ಆಶ್ಡೆನ್ ಪ್ರಶಸ್ತಿಯಾಗಿದ್ದು, ಜೂನ್‌ 11ರಂದು ಲಂಡನ್‌ನ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಲಿಂಕ್ಸ್ ಇನ್ ಎಂಟರ್‌ಪ್ರೈಸ್ ಅಕೌಂಟ್ ಡೈರೆಕ್ಟರ್ ಮತ್ತು ಗೋ ಗ್ರೀನ್ ಲೀಡ್‌ನ ಮುಖ್ಯಸ್ಥ ಕ್ರಿಸ್ ಬೆನೆಟ್, ಈ ಪ್ರಶಸ್ತಿಯನ್ನು ಸೆಲ್ಕೋದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಮತ್ತು ಉಪಮಹಾಪ್ರಬಂಧಕ ಸುದೀಪ್ತ ಘೋಷ್ ಅವರಿಗೆ ಪ್ರದಾನ ಮಾಡಿದರು.ಗೋ ಗ್ರೀನ್ ಇಂಗ್ಲೆಂಡ್‌ನ ಹವಾಮಾನ ರಾಯಭಾರಿ ರಾಚೆಲ್ ಕೈಟ್ ಮತ್ತು ಉಗಾಂಡಾದ ಪರಿಸರವಾದಿ ವನೆಸ್ಸಾ ನಕೇಟ್ ಅವರು ಸೆಲ್ಕೋ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು. 

2005 ಮತ್ತು 2007ರಲ್ಲೂ ಸೆಲ್ಕೋ ಸಂಸ್ಥೆಗೆ ಆಶ್ಡೆನ್ ಪ್ರಶಸ್ತಿ ಲಭಿಸಿದ್ದು, 25ನೇ ವರ್ಷದ ಗೌರವವನ್ನೂ ಮುಡಿಗೇರಿಸಿಕೊಂಡ ಸೆಲ್ಕೂ ಸಾಧನೆಯಿಂದಾಗಿ ಭಾರತದ ಪರಿಸರ ಕ್ಷೇತ್ರವೇ ಹೆಮ್ಮೆ ಪಡುವಂತಾಗಿದೆ.ಸೆಲ್ಕೋ ಸಾಧನೆಯ ಹಾದಿ:1995ರಲ್ಲಿ ಡಾ. ಹರೀಶ್ ಹಂದೆ ಮತ್ತು ನೆವಿಲ್ಲೆ ವಿಲಿಯಮ್ಸ್ ಅವರು ಸ್ಥಾಪಿಸಿದ ಸೆಲ್ಕೋ ಸಂಸ್ಥೆ ಕರ್ನಾಟಕದ ಮನೆಗಳಿಗೆ ಸೌರಬೆಳಕು ಕೈಗೆಟುಕುವಂತೆ ಮಾಡುತ್ತಾ ಇಂದು, ದೇಶದ ಪ್ರಮುಖ ಸಾಮಾಜಿಕ ಉದ್ಯಮವಾಗಿ ಬೆಳೆದಿದೆ. ಆಂಧ್ರಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜನಸಾಮಾನ್ಯರಿಗೆ ಹಸಿರು ಇಂಧನವು ಲಭ್ಯವಾಗುವಂತೆ ಮಾಡುವಲ್ಲಿ ಅಹರ್ನಿಶಿ ಶ್ರಮಿಸುತ್ತಿದೆ. 

ಆಫ್ರಿಕಾ ಮತ್ತು ಅಗ್ನೇಯ ಏಷ್ಯಾದಲ್ಲಿಯೂ ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈವರೆಗೆ ಸೆಲ್ಕೋ ಆರು ಲಕ್ಷಕ್ಕೂ ಹೆಚ್ಚು ಸೌರ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಎಂಬತ್ತು ಲಕ್ಷಕ್ಕೂ ಹೆಚ್ಚು ಸೌರ ವಿದ್ಯುತ್ ಸೌಲಭ್ಯಗಳು ಜನರಿಗೆ ಲಭ್ಯವಾಗುವಂತೆ ಮಾಡಿದೆ. 24,000ಕ್ಕೂ ಹೆಚ್ಚು ಸೌರ-ಜೀವನೋಪಾಯ ವ್ಯವಸ್ಥೆಗಳು ಗ್ರಾಮೀಣ ಜನರಿಗೆ ದೊರೆತಿದೆ. ಐದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಸೌರಶಕ್ತಿ ಚಾಲಿತ ಡಿಜಿಟಲ್ ತರಗತಿ ಕೊಠಡಿಗಳನ್ನು ರೂಪಿಸಿದೆ. 60 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ನೀಡುವ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ವಿದ್ಯುತ್ ಅಳ‍ವಡಿಸಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ