ಕನ್ನಡಪ್ರಭ ವಾರ್ತೆ ಹಾಸನ
ಬಂಧಿತ ಆರೋಪಿಯನ್ನು ಬೆಂಗಳೂರಿನ ಗೆದ್ದಲಹಳ್ಳಿಯ ನಿವಾಸಿ ಸೋಹಿಲ್ ಖಾನ್ ಅಲಿಯಾಸ್ ಸಮೀರ್ ಖಾನ್ (38) ಎಂದು ಗುರುತಿಸಲಾಗಿದೆ. ಈತ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ 3 ಪ್ರಕರಣ, ರಾಜ್ಯದ ವಿವಿಧ ಠಾಣೆಗಳಲ್ಲಿ ಒಟ್ಟು 27 ಪ್ರಕರಣ, ಆಂಧ್ರಪ್ರದೇಶದಲ್ಲಿ ೫೨ ಪ್ರಕರಣಗಳು ಹಾಗೂ ಉಡುಪಿ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಉಡುಪಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಈತನ ವಿರುದ್ಧ ಬೀದರ್ ಪ್ರಕರಣ ವಜಾಗೊಂಡಿದೆ. ಆರೋಪಿಯಿಂದ ಒಟ್ಟು ಸುಮಾರು ೨೫೦ ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಪ್ರಕರಣದ ವಿವರ:
ಶಾಂತಿನಗರದ ನಿವಾಸಿ ಪ್ರೇಮಾ ಅವರು ಸೆಪ್ಟೆಂಬರ್ ೧೫ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಸ್ನೇಹಿತೆಯ ಮನೆಗೆ ತೆರಳಿದ್ದರು. ಮುಕ್ಕಾಲು ಗಂಟೆ ಬಳಿಕ ಮನೆಗೆ ಮರಳಿದಾಗ, ಮನೆಯೊಳಗಿನಿಂದ ಸುಮಾರು ೩೦-೩೫ ವರ್ಷದ ವ್ಯಕ್ತಿ ಹೊರಬಂದಿದ್ದು, ಪ್ರಶ್ನಿಸಿದಾಗ “ನಿಮ್ಮ ಹುಡುಗ ಒಳಗಿದ್ದಾನೆ” ಎಂದು ಹೇಳಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಬಳಿಕ ಮನೆಯೊಳಗೆ ಪರಿಶೀಲಿಸಿದಾಗ ಬೀರುವಿನ ಲಾಕರ್ ಮುರಿದು ಸುಮಾರು ೧೩೪ ಗ್ರಾಂ ಚಿನ್ನಾಭರಣ ಸೇರಿ ಒಟ್ಟು ೮.೦೪ ಲಕ್ಷ ರು. ಮೌಲ್ಯದ ಆಭರಣ ಕಳವಾಗಿರುವುದು ಪತ್ತೆಯಾಗಿದೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಿ ತನಿಖೆ ನಡೆಸಿದ ಪೊಲೀಸರು, ಅಂತರರಾಜ್ಯ ಮನೆಕಳ್ಳನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.