ಅಂತರರಾಜ್ಯ ಪೋಲಿಸ್ ತನಿಖಾ ಕೇಂದ್ರ ಉದ್ಘಾಟನೆ

KannadaprabhaNewsNetwork | Updated : May 18 2025, 11:50 PM IST
ಅಂತರರಾಜ್ಯ ಪೋಲಿಸ್ ತನಿಖಾ ಕೇಂದ್ರ ಉದ್ಘಾಟನೆ
Follow Us

ಕನ್ನಡಪ್ರಭ ವಾರ್ತೆ ಜೋಯಿಡಾ

ತಾಲೂಕಿನ ಗಡಿ ಭಾಗವಾದ ಅನಮೋಡದಲ್ಲಿ ಅಂತರರಾಜ್ಯ ಪೋಲಿಸ್ ತನಿಖಾ ಕೇಂದ್ರವನ್ನು ಭಾನುವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಉದ್ಘಾಟಿಸಿದರು.

ತನಿಖಾ ಠಾಣೆ ಉದ್ಘಾಟನೆ ಮತ್ತು ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪೋಲಿಸ್ ಸಿಬ್ಬಂದಿಗೆ ಇಲ್ಲಿ ಕೆಲಸ ಮಾಡಲು ಯಾವುದೇ ಸ್ಥಳಾವಕಾಶ ಇರಲಿಲ್ಲ. ರಸ್ತೆಯಲ್ಲಿ ನಿಂತು ಕೆಲಸ ಮಾಡಬೇಕಾಗಿತ್ತು. ಅವರ‌ ಕಷ್ಟಕ್ಕೆ ಸ್ಪಂದಿಸಿ ಇಲ್ಲಿ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ ಎಂದರು.

ಅಂತರರಾಜ್ಯ ಕಳ್ಳರನ್ನು ಹಿಡಿಯಲು, ಮಾದಕ ವಸ್ತುಗಳ ಸಾಗಾಟ ತಡೆಗಟ್ಟಲು ಹಾಗೂ ಅಕ್ರಮ ಸಾಗಾಟಗಳಿಗೆ ಕಡಿವಾಣ ಹಾಕಲು, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ತನಿಖಾ ಠಾಣೆ ನಿರ್ಮಿಸಲಾಗಿದೆ. ಮುಂದೆ ಆ್ಯಂಬುಲೆನ್ಸ್‌ ವ್ಯವಸ್ಥೆ ಕೂಡ ಮಾಡಲಾಗುವುದು. ಈ ತನಿಖಾ ಠಾಣೆ ನಿರ್ಮಿಸಲು ಇಲ್ಲಿನ ಸಿಪಿಐ ಚಂದ್ರಶೇಖರ ಹರಿಹರ ಮತ್ತು ಪಿಎಸ್ ಐ ಬಸವರಾಜ ಮಬನೂರ ಕಾರಣೀಕರ್ತರು ಎಂದರು.

ಜೋಯಿಡಾ ತಾಲೂಕಿನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ರಘುವೀರ ಸ್ವಾಮಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ ಕೆ.ಎಸ್., ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಜೋಯಿಡಾ ಸಿಪಿಐ ಚಂದ್ರಶೇಖರ್ ಹರಿಹರ, ಜೋಯಿಡಾ ತಹಸೀಲ್ದಾರ ಮಂಜುನಾಥ ಮೊನ್ನೋಳಿ, ತಾಲೂಕು ವೈದ್ಯಾಧಿಕಾರಿ ಡಾ.ಸುಜಾತಾ ಉಕ್ಕಲಿ, ಮಾಜಿ ಜಿಪಂ ಸದಸ್ಯ ಸಂಜಯ ಹಣಬರ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಅಖೇತಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಗಾವಡೆ, ಉಪಾಧ್ಯಕ್ಷ ಗುರಪ್ಪ ಹಣಬರ, ರಾಮನಗರ ಗ್ರಾಪಂ ಅಧ್ಯಕ್ಷ ಶಿವಾಜಿ ಗೋಸಾವಿ, ವಿಲಾಸ ದೇಸಾಯಿ, ಕೃಷ್ಣಾ ದೇಸಾಯಿ, ವಿನಯ ದೇಸಾಯಿ, ಅಕ್ಷಯ ರಾವಳ, ಪಿಎಸ್‌ಐಗಳಾದ ಬಸವರಾಜ ಮಬನೂರ, ಮಹೇಶ ಮಾಳಿ, ಮಹಾಂತೇಶ್ ಇದ್ದರು.