ಧಾರವಾಡ:
ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಇಚ್ಛಾಶಕ್ತಿಯಿಂದ ನಡೆದ ವಿಭಿನ್ನ ಪುಸ್ತಕ ಕಾರ್ಯಕ್ರಮದ ದೃಶ್ಯವಿದು. ಶಾಲಾ ಗ್ರಂಥಾಲಯದ ಆಯ್ದ ಪುಸ್ತಕಗಳ ಪರಿಚಯ ಹಾಗೂ ಎಲ್ಲ ಪುಸ್ತಕಗಳ ಪುನರ್ ಮನನ ಕಾರ್ಯಕ್ರಮದಲ್ಲಿ ಮಕ್ಕಳು ತಾವು ಓದಿದ ಪುಸ್ತಕಗಳನ್ನು ಪರಿಚಯಿಸಿದರು.
ಶಾಲಾ ಡೆಸ್ಕ್‌ಗಳ ಮೇಲೆ ಕಲೆ, ಸಾಹಿತ್ಯ, ಸಚಿತ್ರ, ಕಥೆಗಳು, ಕಾದಂಬರಿ, ಮೋಜಿನ ಗಣಿತ, ವಿಜ್ಞಾನ, ಯೋಗದ, ಉಪವಾಸದ ಮಹತ್ವ, ಬ್ರಹ್ಮಾಂಡ ರಹಸ್ಯ, ಸಾಮಾನ್ಯ ಜ್ಞಾನ, ಕ್ಷಣ ಹೊತ್ತು ಆಣಿ ಮುತ್ತು, ವ್ಯಕ್ತಿತ್ವ ವಿಕಸನ, ಸಮಾಜ, ಇತಿಹಾಸ, ಶಬ್ದಕೋಶಗಳು ಹೀಗೆ ಎಲ್ಲ ಮಾದರಿಯ, ವೈವಿಧ್ಯಮಯ ವಿಷಯಗಳುಳ್ಳ ಮೂರು ಸಾವಿರಕ್ಕೂ ಅಧಿಕ ಪುಸ್ತಕಗಳು ಕಂಡುಬಂದವು.ಅಧ್ಯಕ್ಷತೆ ವಹಿಸಿದ್ದ ಬಿ.ಪಿ ಜೋಶಿ, ಮಕ್ಕಳು ಶಾಲಾ ಪುಸ್ತಕಗಳೊಂದಿಗೆ ಇತರ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕ ಓದುವುದರಿಂದ ಅರಿವು, ಜ್ಞಾನ, ವಿವೇಕ ಅಧಿಕವಾಗುವುದು. ಸಮಯದ ಸದ್ಬಳಕೆ ಆಗುವುದು. ಉತ್ತಮ ವಿಚಾರಗಳನ್ನು ಅರಿತು ಉತ್ತಮ ಬದುಕು ನಡೆಸಲು ಪುಸ್ತಕಗಳು ದಾರಿದೀಪದಂತೆ ಕೆಲಸ ಮಾಡುತ್ತೇವೆ ಎಂದರು.
ಶಾಲಾ ಸಿಬ್ಬಂದಿ ಸತ್ಯನಾರಾಯಣ ಜೋಶಿ ಇದ್ದರು. ಲೇಖಕ ಶಿಕ್ಷಕರಾದ ರಂಗನಾಥ ವಾಲ್ಮೀಕಿ ನಿರೂಪಿಸಿದರು. ಶಿಕ್ಷಕಿಯರಾದ ಸುನೀತಾ ಗೊರವರ ಸ್ವಾಗತಿಸಿದರು. ಉಷಾ ಶಿವಣ್ಣನವರ ವಂದಿಸಿದರು.