ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಪತ್ರಕರ್ತರಿಗೆ ಜ್ಞಾನ, ಹೃದಯವಂತಿಕೆ, ಬರವಣಿಗೆ ಈ ಮೂರೂ ಅಂಶಗಳನ್ನು ಹೊಂದಿರಬೇಕು. ಸಾಮಾಜಿಕ ಕಳಕಳಿ ಇಟ್ಟುಕೊಂಡು ವರದಿಗಳನ್ನು ಮಾಡಬೇಕು. ಸುದ್ದಿಯ ವೇಗ ನಾಗಾಲೋಟದಲ್ಲಿದೆ. ಆ ವೇಗದಲ್ಲಿ ಯಾವುದಾದರೊಂದು ತಪ್ಪಾದರೂ ಅದು ಅತಿ ಶೀಘ್ರದಲ್ಲಿ ಲಕ್ಷಾಂತರ ಜನರನ್ನು ತಲುಪಿರುತ್ತದೆ. ಆ ತಪ್ಪನ್ನು ಸರಿಪಡಿಸುವಷ್ಟರಲ್ಲಿ ಅದೇ ಸತ್ಯವೆಂದು ಜನರು ನಂಬಿರುತ್ತಾರೆ. ಅಂತಹ ತಪ್ಪುಗಳು ವರದಿಗಾರರಿಂದ ಆಗಬಾರದು ಎಂದು ಉದಾಹರಣೆ ಸಹಿತ ವಿವರಿಸಿದರು.ಪತ್ರಕರ್ತರ ಮೇಲೆ ಸಮಾಜ ಇನ್ನೂ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದೆ. ಅದಕ್ಕೆ ಚ್ಯುತಿ ಬರದ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸಬೇಕು. ಕಪೋಲಕಲ್ಪಿತ ವರದಿಗಳಿಗೆ ಮನ್ನಣೆ ನೀಡಬಾರದು. ವರದಿ ಮಾಡುವುದಕ್ಕೂ ಮುನ್ನ ಅದರ ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡುವುದು ಪತ್ರಕರ್ತರಾದವರ ಕರ್ತವ್ಯ. ಅದನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸತ್ಯನಿಷ್ಠ ವರದಿಗಾರಿಕೆಯನ್ನು ಪತ್ರಕರ್ತರು ರೂಢಿಸಿಕೊಳ್ಳಬೇಕು. ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು, ಸಮಾಜದ ಸ್ವಾಸ್ಥ್ಯ ಹಾಳಾಗದ ರೀತಿಯಲ್ಲಿ ವರದಿಗಾರಿಕೆ ಮಾಡಬೇಕು. ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಎಂದಿಗೂ ಮರೆಯಬಾರದು ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಪತ್ರಕರ್ತರ ಸಂಘಕ್ಕೆ ಲಿಫ್ಟ್ ವ್ಯವಸ್ಥೆ ಮಾಡಿಸಿಕೊಡಲು ೫ ಲಕ್ಷ ರು. ನೀಡಿದ್ದೇನೆ. ಇನ್ನೂ ಹೆಚ್ಚಿನ ನೆರವು ನೀಡುವುದಕ್ಕೂ ಸಿದ್ಧನಿದ್ದೇನೆ. ಪತ್ರಕರ್ತರಿಗಾಗಿ ವಿವೇಕಾನಂದ ಬಡಾವಣೆಯಲ್ಲಿ ವಿಶಾಲವಾದ ಜಾಗ ನೀಡಲು ಸಿದ್ಧನಿದ್ದೇನೆ. ಎಲ್ಲರೂ ಒಟ್ಟಾಗಿ ಬಂದರೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ದೊರಕಿಸಿಕೊಡಲು ಬದ್ಧನಾಗಿದ್ದೇನೆ ಎಂದರು.
ನೂತನ ಆಡಳಿತ ಮಂಡಳಿ ಸದಸ್ಯರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶಾಲು ಹೊದಿಸಿ ಪ್ರಮಾಣಪತ್ರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಸಂಘದ ಅಧ್ಯಕ್ಷ ಕೆ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಶಶಿಧರ, ಕೆ.ಶ್ರೀನಿವಾಸ್ ಇತರರು ಹಾಜರಿದ್ದರು.