ಯಲ್ಲಾಪುರ: ಕೃಷಿ, ವ್ಯಾಪಾರ, ಉದ್ಯೋಗ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ನಾವು ಕೆಲಸ ಮಾಡಿ, ಅದರ ಆದಾಯ ಮತ್ತು ಖರ್ಚಿನ ಕುರಿತು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಆಗ ಬದುಕು ಶಿಸ್ತುಬದ್ಧವಾದೀತು ಎಂದು ಜಿಎಸ್‌ಟಿ ಇಲಾಖೆಯ ಉಪ ಆಯುಕ್ತೆ ಸಹನಾ ಬಾಳ್ಕಲ್ ಹೇಳಿದರು.ಅವರು ಶನಿವಾರ ಅಡಿಕೆ ಭವನದಲ್ಲಿ ಜಸ್ಟ್ ಕ್ಯಾಬ್, ಅಶ್ವಿನಿ ಹೆಗಡೆ ಮತ್ತು ಅಸೋಸಿಯೇಟ್ಸ್ ಆಶ್ರಯದಲ್ಲಿ ಅರ್ಥಸೇತು ಎಂಬ ವಿಮೆ, ಹಣಕಾಸಿನ ಅರಿವಿನ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್, ಅಂಚೆ ಕಚೇರಿ, ವಿಮೆಯ ಹೂಡಿಕೆಗಳು ನಮಗೆ ಹೆಚ್ಚು ವಿಶ್ವಾಸಾರ್ಹವಾದರೂ, ಹೆಚ್ಚಿನ ಆದಾಯ ಗಳಿಸುವಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸುವುದರಿಂದ ಕಂಪನಿಗಳಿಗೂ ಹೆಚ್ಚು ಉತ್ತೇಜನ ನೀಡಿದಂತಾಗುತ್ತದೆ. ನಮ್ಮ ಆದಾಯವೂ ಶೀಘ್ರದಲ್ಲಿ ಹೆಚ್ಚುತ್ತದೆ. ಹಾಗಂತ ನಮ್ಮ ಆದಾಯದ ಉಳಿಕೆಯ ಎಲ್ಲ ಹಣವನ್ನೂ ಒಂದೇ ಕಡೆ ತೊಡಗಿಸುವುದು ಅಷ್ಟು ಪ್ರಶಸ್ತವಾದುದಲ್ಲ. ಆ ದೃಷ್ಟಿಯಿಂದ ಇಂತಹ ಚಿಂತನೆಗಳು ಸಮಾಜದಲ್ಲಿ ಆಗಬೇಕಾಗಿದೆ. ಇದರಿಂದ ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯ ಎಂದರು.ಮಣಿಪಾಲ ಸಿಗ್ನಾ ಹೆಲ್ತ್ ಇನ್ಶುರೆನ್ಸ್ ಕಂಪನಿಯ ಪ್ರಾದೇಶಿಕ ತರಬೇತಿ ವ್ಯವಸ್ಥಾಪಕ ಕೃಷ್ಣಕುಮಾರ ಮಾತನಾಡಿ, ಆರೋಗ್ಯ ವಿಮೆಯ ಅಗತ್ಯತೆ, ಅನಿವಾರ್ಯತೆ ನಮಗೆ ಹೇಗಿದೆ, ಅದರಿಂದ ಯಾವ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಸಮಾಜದಲ್ಲಿಂದು ಬದುಕು ಅನಿಶ್ಚಿತವಾಗುತ್ತಿದೆ. ಅಲ್ಲದೇ ವೈದ್ಯಕೀಯ ವೆಚ್ಚಗಳು ಅಷ್ಟೇ ಹೆಚ್ಚುತ್ತಿದೆ. ಸಾಮಾನ್ಯರು, ಬಡವರು ತೀವ್ರ ಕಾಯಿಲೆ, ಅಪಘಾತದಂತಹ ಸಂದರ್ಭದಲ್ಲಿ ಆರ್ಥಿಕವಾಗಿ ತೊಂದರೆಗೆ ಸಿಲುಕಬೇಕಾಗುತ್ತದೆ. ಪ್ರತಿಯೊಬ್ಬರೂ ನಮ್ಮ ಮಣಿಪಾಲ ಸಿಗ್ನಾ ವಿಮೆ ಮಾಡಿಸಿದರೆ ಅತ್ಯಂತ ಸುಲಭವಾಗಿ ಪ್ರಯೋಜನಗಳನ್ನು ಪಡೆಯಬಹುದು ಎಂದರು.ಬೆಂಗಳೂರಿನ ಐಐಎಫ್‌ಎಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರವೀಣ ಕವಡಿಮಟ್ಟಿ ಮಾತನಾಡಿ, ಆಧುನಿಕ ಹೂಡಿಕೆಗಳ ಅವಕಾಶಗಳು, ಅದರಲ್ಲಿರುವ ಸವಾಲುಗಳ ಕುರಿತು ಮಾಹಿತಿ ನೀಡಿದರು.
ಸಂಘಟಕಿ ಸಿಎ ಅಶ್ವಿನಿ ಹೆಗಡೆ ಸ್ವಾಗತಿಸಿ, ಪರಿಚಯಿಸಿದರು. ಸೃಷ್ಟಿ ಸತೀಶ ಹೆಬ್ಬಾರ ನಿರ್ವಹಿಸಿದರು. ಜಸ್ಟ್ ಕ್ಯಾಬ್ ಮುಖ್ಯಸ್ಥ ಸತೀಶ ಹೆಬ್ಬಾರ ವಂದಿಸಿದರು.