ಕಾರ್ಕಳ: ಹೆಬ್ರಿ ತಾಲೂಕಿನಲ್ಲಿ ಅನೇಕ ದಶಕಗಳಿಂದ ಅರಣ್ಯ ಇಲಾಖೆಯ ತಾಂತ್ರಿಕ ಗೊಂದಲಗಳಿಂದಾಗಿ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿ ವಿಳಂಬವಾಗಿತ್ತು. ಈಗ ಸರ್ಕಾರ ಮತ್ತು ಉಡುಪಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಜಂಟಿ ಸರ್ವೆ ಕಾರ್ಯ ಮಂಗಳವಾರ ಆರಂಭವಾಗಿದೆ.
ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳ ಜೊತೆಗೆ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು ನಾಡ್ಪಾಲು ಮತ್ತು ಹೆಬ್ರಿ ಗ್ರಾಮಗಳಲ್ಲಿ ಜಂಟಿ ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.ನಾಡ್ಪಾಲು ಗ್ರಾಮದಲ್ಲಿ 150ಕ್ಕೂ ಹೆಚ್ಚು ಹಾಗೂ ಹೆಬ್ರಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಅಕ್ರಮ–ಸક્રમ ಅರ್ಜಿ ನಮೂನೆ 50, 53 ಮತ್ತು 57ರ ಫಲಾನುಭವಿಗಳು ಹಕ್ಕುಪತ್ರದ ನಿರೀಕ್ಷೆಯಲ್ಲಿ ಇದ್ದರು. ಇವರ ಸಮಸ್ಯೆ ಪರಿಹರಿಸಲು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ-ಕಾರ್ಕಳದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಅದರಿಂದಲೇ ಜಂಟಿ ಸರ್ವೆ ಕಾರ್ಯಕ್ಕೆ ಗತಿಯಾಗಿದೆ.ನೀರೆ ಕೃಷ್ಣ ಶೆಟ್ಟಿ ಪ್ರಕಾರ, ಪರಭಾದಿತ ಪ್ರದೇಶ ಹಾಗೂ ಪಕ್ಕದ ಸರ್ವೆ ನಂಬರಿನಲ್ಲಿ ಗೊಂದಲವಿದ್ದರೆ, ಕಂದಾಯ ಇಲಾಖೆ ಪ್ರಸ್ತಾವನೆ ನಿಯಮಾನುಸಾರ ಅರಣ್ಯ ಇಲಾಖೆಗೆ ಕಳುಹಿಸಬೇಕೆಂಬ ನಿರ್ದೇಶನ ಈಗಾಗಲೇ ನೀಡಲಾಗಿದೆ. ಜಂಟಿ ಸರ್ವೆಯಿಂದ 50-60 ವರ್ಷಗಳಿಂದ ತಮ್ಮ ಜಾಗದ ಹಕ್ಕುಪತ್ರಕ್ಕೆ ಕಾಯುತ್ತಿರುವ ಬಡ ಕೃಷಿಕರಿಗೆ ನ್ಯಾಯ ದೊರೆಯಲಿದೆ ಎಂದು ತಿಳಿಸಿದರು.ನಾಡ್ಪಾಲು ಗ್ರಾಮದ ಸರ್ವೆ ನಂ.126ರಲ್ಲಿ 28,205 ಎಕರೆ ಮತ್ತು ಹೆಬ್ರಿ ಗ್ರಾಮದ ಸರ್ವೆ ನಂ.210ರಲ್ಲಿ 2,238 ಎಕರೆ ಸೇರಿ ಒಟ್ಟು 30,343 ಎಕರೆ ವರದಿಯಾಗಿದೆ. ಆದರೆ ಅರಣ್ಯ ದಾಖಲೆಗಳ ಪ್ರಕಾರ 26,653 ಎಕರೆ ಮಾತ್ರ ಅರಣ್ಯ ಪ್ರದೇಶವಾಗಿದ್ದು, ಉಳಿದ 1,550 ಎಕರೆಗೂ ಹೆಚ್ಚು ಭೂಮಿ ಕಂದಾಯ ಇಲಾಖೆಯ ಅನಾಧೀನ ಜಮೀನಾಗಿ ಗುರುತಿಸಲಾಗಿದೆ.
ನಿರಂತರ ಹೋರಾಟದ ಫಲವಾಗಿ ಇಂದಿನ ಜಂಟಿ ಸರ್ವೆಗೆ ಚಾಲನೆ ದೊರೆತಿದೆ. ನೂರಾರು ಮನೆಮಂದಿಗೆ ಈಗ ಪಟ್ಟಾ ದೊರಕುವ ಭರವಸೆ ಮೂಡಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು.ಹೆಬ್ರಿ ತಹಸೀಲ್ದಾರ್ ಎಸ್.ಎ. ಪ್ರಸಾದ್ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಧಿಕಾರಿ ನಿರ್ದೇಶನದಂತೆ ಜಂಟಿ ಸರ್ವೆ ನಡೆಯುತ್ತಿದೆ. ನಾಡ್ಪಾಲಿನ ಬಳಿಕ ವರಂಗ, ಶಿವಪುರ, ಅಂಡಾರು ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಕ್ರಮವಾಗಿ ಜಂಟಿ ಸರ್ವೆ ಕೈಗೆತ್ತಿಕೊಳ್ಳಲಾಗುತ್ತದೆ. ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಬಳಿಕ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿ ಸೇರಿದಂತೆ ಉಳಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.