ಅಸಮರ್ಪಕ ಬಸ್ ಸಂಚಾರ, ಗದಗದಲ್ಲಿ ಬಸ್ ತಡೆದು ಪ್ರತಿಭಟನೆ

KannadaprabhaNewsNetwork |  
Published : Sep 12, 2026, 02:30 AM IST
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಅಸಮರ್ಪಕ ಬಸ್ ಅವ್ಯವಸ್ಥೆಯ ವಿರುದ್ಧ ದಿಢೀರ್‌ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ನಿಗದಿತ ವೇಳೆ ಬಸ್‌ ಬಾರದ ಹಿನ್ನೆಲೆಯಲ್ಲಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಿದ್ಯಾರ್ಥಿಗಳು ವಾಯವ್ಯ ಸಾರಿಗೆ ಸಂಸ್ಥೆಯ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು.

ಗದಗ: ನಿಗದಿತ ವೇಳೆ ಬಸ್‌ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ಲಕ್ಕುಂಡಿ ಗ್ರಾಮದ ವಿದ್ಯಾರ್ಥಿಗಳು ವಾಯವ್ಯ ಸಾರಿಗೆ ಸಂಸ್ಥೆಯ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕಳೆದ ಒಂದು ತಿಂಗಳಿಂದ ಶಾಲಾ ವೇಳೆಗೆ ಸಮರ್ಪಕವಾಗಿ ನಮ್ಮೂರಿಗೆ ಬಸ್ ಬರದೇ ಇರುವುದರಿಂದ ಶಾಲೆಗೆ ತಡವಾಗಿ ಹೋಗಿದ್ದಕ್ಕೆ ಶಿಕ್ಷಕರು ನಮ್ಮನ್ನು ತರಗತಿಯಿಂದ ಹೊರಗೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪಾಲಕರು ಹಾಗೂ ಕೂಲಿ ಕಾರ್ಮಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿರುದ್ಧ ಘೋಷಣಿ ಕೂಗಿದರು. 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆದಿದ್ದರಿಂದ ಗದಗ, ಹುಬ್ಬಳ್ಳಿ, ಕೊಪ್ಪಳ, ವಿಜಯನಗರ, ರಾಯಚೂರು, ಬೆಳಗಾವಿ, ಹಾವೇರಿ, ಬಳ್ಳಾರಿ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಬೆಳಗ್ಗೆ 8ರಿಂದ 10ರ ವರೆಗೂ ಗದಗ ನಗರ ಹಾಗೂ ಹುಬ್ಬಳ್ಳಿಗೆ ಶಾಲಾ-ಕಾಲೇಜಿಗೆ ಹೋಗುತ್ತೇವೆ. ಈ ಸಮಯದಲ್ಲಿ ಸಮರ್ಪಕ ಬಸ್ ಇಲ್ಲದೇ ಗೋಳಾಡುತ್ತ, ಬಸ್ ಕಾಯುತ್ತಾ ನಿಲ್ಲುತ್ತೇವೆ. ಈ ಕುರಿತು ಹಲವಾರು ಸಲ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ ಸಮರ್ಪಕ ಬಸ್ ಒದಗಿಸುವ ಭರವಸೆ ನೀಡುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ಬಸ್ ನಿಲ್ದಾಣದ ನಿಯಂತ್ರಣ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಮತ್ತು ಪಾಲಕರು ತೀವ್ರ ತರಾಟೆಗೆ ತೆಗೆದುಕೊಂಡರು. ಸಮಯಕ್ಕೆ ಸರಿಯಾಗಿ ಬಸ್ ಬಿಡುತ್ತಿಲ್ಲ ಎಂದು ಮನವಿ ಸಲ್ಲಿಸಿದರೂ ಕ್ಯಾರೆ ಅನ್ನುತ್ತಿಲ್ಲ. ಗದಗ ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಸಾರಿಗೆ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಗೊಂದಲಮಯ ವಾತಾವರಣ ಸೃಷ್ಠಿಯಾಯಿತು.

ಇನ್ನೂ ನಾಲ್ಕೈದು ದಿನಗಳಲ್ಲಿ ಗದಗ ಸಾರಿಗೆ ಸಂಸ್ಥೆ ವಿಭಾಗದಿಂದ ಬೆಳಗ್ಗೆ ವಿದ್ಯಾರ್ಥಿಗಳ ಶಾಲಾ ವೇಳೆಗೆ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗದಗ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರ ಜತೆ ಚರ್ಚಿಸಲಾಗುವುದು. ಬೈಪಾಸ್ ಸಂಚರಿಸುವ ಉಳಿದ ವಿಭಾಗದ ವ್ಯವಸ್ಥಾಪಕರಿಗೆ ಪತ್ರ ಬರೆದು ಬಸ್ ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ವಹಿಸಲು ಎಲ್ಲ ಬಸ್‌ಗಳನ್ನು ಲಕ್ಕುಂಡಿ ಬಸ್ ನಿಲ್ದಾಣಕ್ಕೆ ಬರುವಂತೆ ಮಾಡಲಾಗುವುದು ಎಂದು ಗದಗ ಬಸ್ ನಿಲ್ದಾಣದ ಮೇಲ್ವಿಚಾರಕ ತಿಮ್ಮನಗೌಡರ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಿದ್ಯಾರ್ಥಿ ಪರಿಷತ್ ಮುಖಂಡ ಬಸವರಾಜ ಮುಳ್ಳಾಳ, ಬಸನಗೌಡ ಬಿರಾದಾರ, ಮರಿಯಪ್ಪ ವಡ್ಡರ, ವೀರೇಶ ಮುಸ್ಕಿನಭಾವಿ, ಬಸವರಾಜ ಕವಲೂರು, ಮಲ್ಲೇಶ ದಂಡಿನ, ಪರಸಪ್ಪ ಕರಿಯಲ್ಲಪ್ಪನವರ, ವಿನಾಯಕ ಡಿಗ್ಗಾವಿ ಇದ್ದರು.

ಪೊಲೀಸರು ವಿರುದ್ಧ ಆಕ್ರೋಶ: ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವಾಗ ಸಂದರ್ಭದಲ್ಲಿ ಪೊಲೀಸರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದ ಬಳಸಿದ್ದರಿಂದ ವಿದ್ಯಾರ್ಥಿ ಪಾಲಕರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಕೆಲಹೊತ್ತು ವಾಗ್ವಾದ, ಗದ್ದಲ ಏರ್ಪಟ್ಟಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೋಕನ್ ವ್ಯವಸ್ಥೆಯಿಂದ ಪ್ರವಾಸೋದ್ಯಮ ನೆಚ್ಚಿಕೊಂಡವರಿಗೆ ಸಮಸ್ಯೆ
ಧರ್ಮಶಾಸ್ತ್ರದಲ್ಲೂ ಶುದ್ಧ ನೀರಿಗೆ ಒತ್ತು: ರಾಘವೇಶ್ವರ ಶ್ರೀ