ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿದೆಯಾ ಗಾಂಜಾ ಘಾಟು?

KannadaprabhaNewsNetwork |  
Published : Jun 20, 2026, 02:15 AM IST
ರೋಹನ್ ಜಗದೀಶ ಎಸ್ಪಿ ಗದಗ | Kannada Prabha

ಸಾರಾಂಶ

ಒಟ್ಟು 27 ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದು, ಗಾಂಜಾ ಸೇವನೆ ಮಾಡಿದ ಆರೋಪದಡಿ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಜಾಲ ವಿಸ್ತರಿಸುತ್ತಿರುವ ಆತಂಕದ ನಡುವೆ, ಗದಗ ಜಿಲ್ಲೆಯಲ್ಲಿಯೂ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣ ಬೆಳಕಿಗೆ ಬರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ 6 ತಿಂಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ನಡೆಸಿದ ವಿವಿಧ ಕಾರ್ಯಾಚರಣೆಗಳ ಅಂಕಿ- ಅಂಶಗಳು ಒಂದೆಡೆ ಸಮಾಧಾನ ತಂದರೆ ಇನ್ನೊಂದೆಡೆ ಆತಂಕವನ್ನು ಸೃಷ್ಟಿಸುತ್ತಿವೆ.

ಒಟ್ಟು 27 ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದು, ಗಾಂಜಾ ಸೇವನೆ ಮಾಡಿದ ಆರೋಪದಡಿ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಗಾಂಜಾ ಸೇವನೆ ಪ್ರಕರಣಗಳಲ್ಲಿ ಬಂಧಿತರ ವಿಚಾರಣೆಯ ಬಳಿಕವೇ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು, ಸಂಗ್ರಹಣೆ ಹಾಗೂ ಮಾರಾಟದ ಜಾಲದ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಆಧರಿಸಿ ಪೊಲೀಸರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಒಟ್ಟು 7.48 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆಯ ಅಂಕಿ- ಅಂಶಗಳ ಪ್ರಕಾರ, ವಶಪಡಿಸಿಕೊಂಡಿರುವ ಗಾಂಜಾದ ಅಂದಾಜು ಮೌಲ್ಯ ₹512480 ಆಗಿದೆ. ಇದರಿಂದ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಬೇಕಿದೆ.

ಸಮಾಧಾನದ ಸಂಗತಿ: ಜಿಲ್ಲೆಯ ಯುವ ಸಮುದಾಯದಲ್ಲಿ ಗಾಂಜಾ ಸೇವನೆಯ ಪ್ರವೃತ್ತಿ ಆತಂಕಾರಿ ಬೆಳವಣಿಗೆಯಾಗಿದೆ. ಆದರೆ, ಸಮಾಧಾನದ ಸಂಗತಿ ಎಂದರೆ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೆಮಿಕಲ್ ಡ್ರಗ್ಸ್ ಬಳಕೆ, ಮಾರಾಟ ಅಥವಾ ಸಾಗಾಟದ ಪ್ರಕರಣಗಳು ದಾಖಲಾಗಿಲ್ಲ. ಸಿಂಥೆಟಿಕ್ ಡ್ರಗ್ಸ್, ಎಂಡಿಎಂಎ, ಕೊಕೇನ್ ಅಥವಾ ಇತರೆ ರಾಸಾಯನಿಕ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಪತ್ತೆಯಾಗದಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.

ಗಾಂಜಾಕ್ಕೆ ಯಾವ ಕಾನೂನು ಅನ್ವಯ?: ಮಾದಕ ದ್ರವ್ಯ ಮತ್ತು ಮನೋವೈಜ್ಞಾನಿಕ ಪದಾರ್ಥಗಳ ನಿಯಂತ್ರಣ ಕಾಯ್ದೆ, 1985(NDPS Act) ಅಡಿಯಲ್ಲಿ ಗಾಂಜಾ ಬೆಳೆಯುವುದು, ಹೊಂದಿರುವುದು, ಸಾಗಾಟ, ಮಾರಾಟ ಹಾಗೂ ಸೇವನೆ ಅಪರಾಧವಾಗಿದೆ. ಕಲಂ 8(ಸಿ), ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ, ಖರೀದಿ, ಸಾಗಾಟ ಮತ್ತು ಬಳಕೆಗೆ ನಿಷೇಧ. ಕಲಂ 20(ಬಿ) ಗಾಂಜಾ ಹೊಂದಿರುವುದು, ಸಾಗಾಟ ಅಥವಾ ಮಾರಾಟ. ಕಲಂ 20(ಎ) ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆಸುವುದು. ಕಲಂ 27 ಗಾಂಜಾ ಸೇವನೆ. ಕಲಂ 29 ಮಾದಕ ವಸ್ತುಗಳ ಕಳ್ಳಸಾಗಣೆ ಅಥವಾ ಮಾರಾಟಕ್ಕೆ ಸಂಚು ರೂಪಿಸುವುದು ಅಥವಾ ಸಹಕಾರ ನೀಡುವುದು ಅಪರಾಧವಾಗಿದೆ.

ಶಿಕ್ಷೆ ಏನು?: ಗಾಂಜಾ ಪ್ರಮಾಣದ ಆಧಾರದ ಮೇಲೆ ಶಿಕ್ಷೆಯ ಪ್ರಮಾಣ ಬದಲಾಗುತ್ತದೆ. ಸಣ್ಣ ಪ್ರಮಾಣ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡೂ. ಮಧ್ಯಮ ಪ್ರಮಾಣ, 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ. ವಾಣಿಜ್ಯ ಪ್ರಮಾಣ 20 ಕೆಜಿಗಿಂತ ಹೆಚ್ಚು ಗಾಂಜಾ ಪತ್ತೆಯಾದರೆ 10ರಿಂದ 20 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1ರಿಂದ 2 ಲಕ್ಷದವರೆಗೆ ದಂಡ ವಿಧಿಸಬಹುದು. ಗಾಂಜಾ ಸೇವನೆಗೆ ಗರಿಷ್ಠ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10 ಸಾವಿರ ರು. ದಂಡ, ಅಥವಾ ಎರಡೂ ವಿಧಿಸಬಹುದು.

ಯುವಕರೇ ಎಚ್ಚರ: ಮಾನಸಿಕ ತಜ್ಞರ ಪ್ರಕಾರ, ಕುತೂಹಲ, ಸ್ನೇಹಿತರ ಒತ್ತಡ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಡೆಯಲು ಪೋಷಕರು, ಶಿಕ್ಷಕರು ಮತ್ತು ಸಮಾಜದ ಪಾತ್ರ ಮಹತ್ವದ್ದಾಗಿದೆ. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಪೋಷಕರು ಮಕ್ಕಳ ವರ್ತನೆಯಲ್ಲಿ ಅಸಹಜ ಬದಲಾವಣೆ ಕಂಡುಬಂದರೆ ತಕ್ಷಣ ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಕಟ್ಟುನಿಟ್ಟಿನ ಕ್ರಮ: ಮಾದಕ ವಸ್ತುಗಳ ವಿರುದ್ಧದ ಹೋರಾಟ ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ. ಪೋಷಕರು, ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಗಾಂಜಾ ಜಾಲವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ. ಜಿಲ್ಲೆಯಲ್ಲಿ ಕಳೆದ ವ್ಯಾಪಕ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕಿಟ್‌ ಅವ್ಯವಹಾರ ತನಿಖೆಗೆ ಒತ್ತಾಯ
ಪೋಷಕತ್ವ ಯೊಜನೆಗೆ ಅರ್ಹರು ಅರ್ಜಿ ಸಲ್ಲಿಸಿ