ಚುಂಚಶ್ರೀ ಹಾದಿ ತಪ್ಪಿದ್ದಾರೆಂಬುದಕ್ಕೆ ಸಾಕ್ಷ್ಯಾಧಾರವಿದೆಯೇ?

KannadaprabhaNewsNetwork |  
Published : Mar 17, 2026, 01:30 AM IST
ಪ್ರೊ.ಬಿ.ಜಯಪ್ರಕಾಶಗೌಡ | Kannada Prabha

ಸಾರಾಂಶ

ಗಾಳಿಯಲ್ಲಿ ಗುಂಡು ಹೊಡೆದಂತೆ ಸ್ಪಷ್ಟತೆ, ನಿಖರತೆ ಇಲ್ಲದೆ ಗುರುಪೀಠದ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಸ್ವಾಮೀಜಿ ಅವರು ಎಲ್ಲರನ್ನೂ ಒಳಗೊಳ್ಳುತ್ತಾ, ಎಲ್ಲರಿಗೂ ಒಳಿತಾಗುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ಸಮುದಾಯ ಗಮನಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳು ಹಾದಿ ತಪ್ಪಿದ್ದಾರೆ, ತಪ್ಪು ಹೆಜ್ಜೆಗಳನ್ನಿಡುತ್ತಿದ್ದಾರೆಂದು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸಾರ್ವಜನಿಕ ಸಮಾರಂಭದಲ್ಲಿ ನಿಂದಿಸಿರುವ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಹೇಳಿಕೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಖಂಡಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹೊಡೆದಂತೆ ಸ್ಪಷ್ಟತೆ, ನಿಖರತೆ ಇಲ್ಲದೆ ಗುರುಪೀಠದ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಸ್ವಾಮೀಜಿ ಅವರು ಎಲ್ಲರನ್ನೂ ಒಳಗೊಳ್ಳುತ್ತಾ, ಎಲ್ಲರಿಗೂ ಒಳಿತಾಗುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ಸಮುದಾಯ ಗಮನಿಸಿದೆ. ಶಿಕ್ಷಣ, ಸಂಸ್ಕೃತಿ, ಧಾರ್ಮಿಕತೆ, ಜಾನಪದ ಈ ಎಲ್ಲವನ್ನೂ ಸಮನ್ವಯಗೊಳಿಸುತ್ತಾ ಮಹತ್ವದ ಹೆಜ್ಜೆ ಇಡುತ್ತಿರುವ ಕಾಲಘಟ್ಟದಲ್ಲಿ ಸ್ವಾಮೀಜಿ ಅವರ ಹೆಜ್ಜೆಗಳನ್ನೇ ಪ್ರಶ್ನಿಸುತ್ತಿರುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಭಿನ್ನಾಭಿಪ್ರಾಯಗಳಿದ್ದರೆ ಮುಕ್ತವಾಗಿ ಮಾತನಾಡಲು, ಅಭಿಪ್ರಾಯ ಹಂಚಿಕೊಳ್ಳಲು, ಚರ್ಚಿಸಲು ಸ್ವಾಮೀಜಿ ಯಾವಾಗಲೂ ಲಭ್ಯವಿರುತ್ತಾರೆ. ಇದೆಲ್ಲವನ್ನೂ ಪಕ್ಕಕ್ಕಿಟ್ಟು ಒಮ್ಮುಖವಾಗಿ ವ್ಯಕ್ತಿಗತ ಈರ್ಷೆಗಳನ್ನೇ ಮುಂದಿಟ್ಟುಕೊಂಡು ಮಾತನಾಡುವುದು ಜನಪ್ರಿಯ ಶಾಸಕರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಮಠಕ್ಕೆ ನಾನೇನು ಹೋಗುವುದಿಲ್ಲ ಎನ್ನುತ್ತಲೇ ಮಠ ಹಾಗೂ ಸ್ವಾಮೀಜಿ ಅವರ ಬಗ್ಗೆ ಹರಿ ಹಾಯುವುದು ಸೂಕ್ತವಲ್ಲ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಕೇವಲ ಒಂದು ಜಾತಿಗೆ ಸೀಮಿತವಾಗಿ ಕೆಲಸಮಾಡದೆ, ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಂಡು ಶಿಕ್ಷಣ ಪ್ರಸಾರದಲ್ಲಿ ತೊಡಗಿದೆ. ಇದನ್ನು ಗಮನಿಸದೆ ಬಿಡು ಬೀಸಾದ ಹೇಳಿಕೆಗಳನ್ನು ಕೊಟ್ಟು ನಂತರ ವಿಷಾದ ವ್ಯಕ್ತಪಡಿಸುತ್ತಾ, ಕ್ಷಮೆ ಯಾಚಿಸುತ್ತಾ ಸಾಗುವುದು ಜನಪ್ರತಿನಿಧಿಯಾದವರಿಗೆ ಸಲ್ಲದು. ಹಾಡುವ ಮಾತಿನ ಬಗ್ಗೆ ಬದ್ಧತೆ ಬೇಕು. ದೊಡ್ಡವರ ಬಗ್ಗೆ ಮಾತನಾಡುತ್ತಲೇ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ.ಚುಂಚಶ್ರೀಗಳ ಬಗ್ಗೆ ಲಘು ಮಾತು: ಶಾಸಕರ ವಿರುದ್ಧ ಒಕ್ಕಲಿಗರ ವೇದಿಕೆ ಖಂಡನೆ

ಕೆ.ಆರ್.ಪೇಟೆ: ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಗಳ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಲಘುವಾಗಿ ಮಾತನಾಡಿದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡರ ನಡೆಯನ್ನು ತಾಲೂಕು ಒಕ್ಕಲಿಗರ ವೇದಿಕೆ ಖಂಡಿಸಿದೆ.ಈ ಕುರಿತು ವೇದಿಕೆ ತಾಲೂಕು ಕಾರ್ಯದರ್ಶಿ ಹಿರೀಕಳಲೆ ಗೌರೀಶ್ ಹೇಳಿಕೆ ಬಿಡುಗಡೆ ಮಾಡಿ, ಶಾಸಕ ರಮೇಶ್ ಬಂಡಿಸಿದ್ದೇಗೌಡರ ಲಘು ಮಾತುಗಳು ತಮ್ಮ ಘನತೆಗೆ ತಕ್ಕುದಾದುದಲ್ಲ ಎಂದು ಕಿಡಿಕಾರಿದ್ದಾರೆ.

ಚುಂಚಶ್ರೀಗಳ ನಡೆಯನ್ನು ವಿಶ್ಲೇಷಿಸುವ ಮುನ್ನ ಶಾಸಕರು ಡಾ.ನಿರ್ಮಲಾನಂದನಾಥ ಶ್ರೀಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಬೇಕಾಗಿತ್ತು. ಶ್ರೀಮಠದ ಸಂಪರ್ಕಕ್ಕೆ ಹೋಗದ ಶಾಸಕರು ಮಠದ ಪೀಠಾಧಿಪತಿಗಳ ನಡೆ ಬಗ್ಗೆ ಮಾತನಾಡಿ, ಶ್ರೀಮಠ ಮತ್ತು ಸಮಸ್ತ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭೈರವೈಕ್ಯ ಶ್ರೀಗಳು ಮಠವನ್ನು ಅನ್ನ, ಅಕ್ಷರ, ಆರೋಗ್ಯ ಎನ್ನುವ ತ್ರಿವಿಧ ದಾಸೋಹದ ಪರಿಕಲ್ಪನೆಯಲ್ಲಿ ತಮ್ಮ ಕಾಯಕ ಶಕ್ತಿಯಿಂದ ಕಟ್ಟಿ ಬೆಳೆಸಿದ್ದಾರೆ. ಡಾ.ಬಾಲಗಂಗಾಧರನಾಥ ಶ್ರೀಗಳು ತೋರಿದ ದಾರಿಯಲ್ಲಿ ಡಾ.ನಿರ್ಮಲಾನಂದನಾಥ ಶ್ರೀಗಳು ಕಾಯಕ ತತ್ವದ ಅಡಿ ಜ್ಞಾನ ಮಾರ್ಗದಿಂದ ಮುನ್ನಡೆಸುತ್ತಿದ್ದಾರೆ. ಇದರ ಅರಿವಿಲ್ಲದ ಶಾಸಕರು ಯಾವುದೋ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಚುಂಚಶ್ರೀಗಳ ನಡೆಯನ್ನು ಪ್ರಶ್ನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುಂಚಶ್ರೀಗಳ ನಡೆ ಪ್ರಶ್ನಿಸುವ ಮುನ್ನ ಶಾಸಕರು ತಮ್ಮ ನಡೆಯನ್ನು ಪ್ರಶ್ನಿಸಿಕೊಳ್ಳಬೇಕು. ಮಾತು ಆಡಿ ಅನಂತರ ಕ್ಷಮೆ ಕೋರುವ ಬದಲು ಮಾತನಾಡುವ ಮುನ್ನವೇ ಎಚ್ಚರಿಕೆ ವಹಿಸಬೇಕು. ಒಕ್ಕಲಿಗ ಸಮುದಾಯದ ಪೀಠಾಧಿಪತಿಗಳ ಬಗ್ಗೆ ಲಘುವಾಗಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ಶಾಸಕರು ಅದರ ಪ್ರತಿಫಲ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ಜಾರಿ ಸಂಬಂಧ ತೀರ್ಮಾನ ಕೈಗೊಳ್ಳಿ
ಗುತ್ತಿಗೆದಾರರು ಪುರಸಭೆ ನಿಯಮದಂತೆ ಸುಂಕ ವಸೂಲಿ ಮಾಡಿ