ಪೂಜಾ ಸ್ಥಳಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲ ಆಗಮನ, ಮನವಿ ಸ್ವೀಕಾರ
ಗದಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಎಲ್ಲಾ ಲಿಂಗಾಯತರನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಗೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕಿನ ಅಸುಂಡಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಸಾತ್ವಿಕ ಆಕ್ರೋಶ ವ್ಯಕ್ತ ಪಡಿಸಿದರು. ಬೆಳಗ್ಗೆ ಗದಗ ನಗರದಲ್ಲಿರುವ ಕಿತ್ತೂರ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ಶ್ರೀಗಳು ಅಲ್ಲಿಂದ ಅಸುಂಡಿ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆಯ ಮೂಲಕ ಹೆದ್ದಾರಿಗೆ ಆಗಮಿಸಿ ಹೆದ್ದಾರಿ ತಡೆ ನಡೆಸಿ, ಅಲ್ಲಿಯೇ ಭಕ್ತರೊಂದಿಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರಲಿ, ಬಿಜೆಪಿ ಸರ್ಕಾರವಿರಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ನನ್ನ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದಾಗ ಅವರು ಒಂದು ತಿಂಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಮ್ಮನ್ನು ಕೂಡಾ ಸಭೆಗೆ ಆಹ್ವಾನಿಸುತ್ತೇನೆ ಎಂದು ಹೇಳಿದ್ದರು. ಆದರೆ ಹಲವಾರು ತಿಂಗಳು ಕಳೆದರೂ ಮುಖ್ಯಮಂತ್ರಿಗಳಿಂದ ಸ್ಪಂದನೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವಂತಾ ಅನಿವಾರ್ಯತೆ ಎದುರಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.ಸಿಎಂ ಜತೆ ಚರ್ಚೆ: ಇಷ್ಟಲಿಂಗ ಪೂಜೆ ಎನ್ನುವುದು ತಲೆ ತಲಾಂತರಗಳಿಂದ ಮನೆಯಲ್ಲಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ನಮ್ಮ ವೈಯಕ್ತಿಕ ನೆಮ್ಮದಿಗಾಗಿ ಮಾಡುವ ಕಾರ್ಯವಾಗಿದೆ. ಆದರೆ ಶ್ರೀಗಳು ಮೀಸಲಾತಿಗಾಗಿ ರಸ್ತೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವುದು ನನಗೆ ಅದ್ಯಾಕೋ ಸರಿ ಕಾಣುತ್ತಿಲ್ಲ. ಶ್ರೀಗಳು ಯಾವ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಇಷ್ಟಲಿಂಗ ಪೂಜೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಈಗಾಗಲೇ ಹೇಳಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರಿಂದ ಹಕ್ಕೊತ್ತಾದ ಮನವಿ ಪತ್ರವನ್ನು ಸ್ವೀಕರಿಸಿದರು. ಸಾಲು ಗಟ್ಟಿ ನಿಂತ ವಾಹನಗಳು: ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಕ್ಕ ಪಕ್ಕದ ರಾಜ್ಯಗಳಿಗೆ ಮತ್ತು ಜಿಲ್ಲೆಗಳಿಗೆ ತೆರಳಬೇಕಾದ ಪ್ರಯಾಣಿಕರು ಪ್ರತಿಭಟನೆ ಹಿನ್ನೆಲೆಯಲ್ಲಿ ಕಿಲೋಮೀಟರ್ ಗಟ್ಟಲೇ ಸಾಲು ಗಟ್ಟಿ ನಿಲ್ಲುವಂತಾಯಿತು. ಇದರಿಂದಾಗಿ ದೂರ ದೂರದ ಊರುಗಳಿಗೆ ತೆರಳವವರು ಸೇರಿದಂತೆ ಸಾವಿರಾರು ಜನರಿಗೆ ಹೆದ್ದಾರಿಯಲ್ಲಿನ ಇಷ್ಟಲಿಂಗ ಪೂಜೆ ತೊಂದರೆದಾಯಕವಾಗಿ ಪರಿಣಮಿಸಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಅನಿಲ ಪಾಟೀಲ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಸಿದ್ದು ಪಲ್ಲೇದ, ಶಿವರಾಜಗೌಡ ಹಿರೇಮನಿಪಾಟೀಲ, ವಸಂತ ಪಡಗದ, ಎಸ್.ವಿ. ಪಾಟೀಲ, ಸಿದ್ದಣ್ಣ ಬಂಡಿ, ವಿಶ್ವನಾಥ ಜಿಡ್ಡಿಬಾಗಿಲ, ಕೊಟ್ರಗೌಡ ಪಾಟೀಲ, ಸಿದ್ದು ದೇಸಾಯಿ, ಸ್ವಾತಿ ಅಕ್ಕಿ ಸೇರಿದಂತೆ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು, ಸಮಾಜದ ಹಿರಿಯರು ಹಾಜರಿದ್ದರು.