ಸಿ, ಡಿ ವರ್ಗದ ಜಮೀನು ಸಮಸ್ಯೆ: ರೈತರಿಂದ ಅಹವಾಲು ಸ್ವೀಕಾರ

KannadaprabhaNewsNetwork |  
Published : Aug 03, 2026, 02:45 AM IST
ಅಹವಾಲು ಸ್ವೀಕಾರ | Kannada Prabha

ಸಾರಾಂಶ

ಜಿಲ್ಲೆಯ ರೈತರನ್ನು ಕಾಡುತ್ತಿರುವ ಸಿ ಮತ್ತು ಡಿ ವರ್ಗದ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಅಧ್ಯಯನ ಸಮಿತಿಯು ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ರೈತರ ಪೂರ್ವಭಾವಿ ಸಭೆ ಆಯೋಜನೆ ಮಾಡಿ, ರೈತರಿಂದ ಅಹವಾಲು ಸ್ವೀಕರಿಸಿತು

ಸೋಮವಾರಪೇಟೆ: ಜಿಲ್ಲೆಯ ರೈತರನ್ನು ಕಾಡುತ್ತಿರುವ ಸಿ ಮತ್ತು ಡಿ ವರ್ಗದ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಅಧ್ಯಯನ ಸಮಿತಿಯು ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ರೈತರ ಪೂರ್ವಭಾವಿ ಸಭೆ ಆಯೋಜನೆ ಮಾಡಿ, ರೈತರಿಂದ ಅಹವಾಲು ಸ್ವೀಕರಿಸಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ಅಡ್ವೊಕೇಟ್ ಜನರಲ್ ಭಾನುಪ್ರಕಾಶ್, ನಿವೃತ್ತ ಡಿಸಿಎಫ್ ಹೂವಯ್ಯ, ನಿವೃತ್ತ ತಹಸೀಲ್ದಾರ್ ಜಯರಾಮ್ ಹಾಗೂ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಉಪಸ್ಥಿತರಿದ್ದರು. ಸಿ ಮತ್ತು ಡಿ ದಾಖಲಾತಿಯಿಂದ ಎದುರಾಗುತ್ತಿರುವ ಸಮಸ್ಯೆಗಳು, ಅರಣ್ಯ ಇಲಾಖೆಯ ಕ್ರಮಗಳು ಹಾಗೂ ಮರು ಭೂಮಾಪನ ಅಗತ್ಯದ ಬಗ್ಗೆ ರೈತರು ವಿವರಿಸಿದರು.

ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಿ ಮತ್ತು ಡಿ ಸಮಸ್ಯೆ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ೩೧ ಸಭೆಗಳು ನಡೆದಿದ್ದು, ಸೋಮವಾರಪೇಟೆ ತಾಲೂಕು ಬಂದ್ ಸೇರಿದಂತೆ ಹಲವು ಹೋರಾಟಗಳನ್ನು ಕೈಗೊಳ್ಳಲಾಗಿದೆ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಸಿ ಮತ್ತು ಡಿ ಜಾಗದ ಸ್ಥಳ ಪರಿಶೀಲನೆ ನಡೆಸದೆ ಸರ್ಕಾರಕ್ಕೆ ಸಮಗ್ರ ವರದಿ ನೀಡಲಾಗಿದೆ. ಭೂಮಿಯನ್ನು ಕೃಷಿಗೆ ಯೋಗ್ಯವಲ್ಲ ಎಂದು ವರದಿ ಸಲ್ಲಿಸಿರುವುದು ಅನ್ಯಾಯವಾಗಿದೆ. ಕಾನೂನನ್ನು ಪಾಲಿಸಿಕೊಂಡು ಕೃಷಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಮಾತನಾಡಿ, ಕೊಡಗಿನಲ್ಲಿ ಬಾಕಿ ಉಳಿದಿರುವ ಮರು ಭೂಮಾಪನ ಕಾರ್ಯವನ್ನು ನುರಿತ ಸರ್ವೆ ಅಧಿಕಾರಿಗಳ ಮೂಲಕ ನಡೆಸಬೇಕು. ರೈತರ ಜಮೀನು, ಪೈಸಾರಿ, ಅರಣ್ಯ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಭೂಮಿಗಳ ಸ್ಪಷ್ಟ ಭೂಪಟ ಸಿದ್ಧಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

ಅಧ್ಯಯನ ಸಮಿತಿ ಸದಸ್ಯರಾದ ನಿವೃತ್ತ ತಹಸೀಲ್ದಾರ್ ಜಯರಾಮ್ ಮಾತನಾಡಿ, ಸಿ ಮತ್ತು ಡಿ ಸಮಸ್ಯೆ ಕುರಿತು ಈಗಾಗಲೇ ಏಳು ಸಭೆಗಳನ್ನು ನಡೆಸಿ ಅಗತ್ಯ ದಾಖಲೆಗಳು ಹಾಗೂ ಮಾಹಿತಿ ಸಂಗ್ರಹಿಸಲಾಗಿದೆ. ಕೃಷಿಗೆ ಯೋಗ್ಯವಾಗಿರುವ ಭೂಮಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ನಿವೃತ್ತ ಡಿಸಿಎಫ್ ಹೂವಯ್ಯ ಮಾತನಾಡಿ, ಕೊಡಗಿನ ವಿವಿಧ ಭಾಗಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ನೈಜ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಿ ಮತ್ತು ಡಿ ದಾಖಲಾತಿಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳು, ಹಾರಂಗಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಹಾಗೂ ಅರಣ್ಯ ಇಲಾಖೆಯ ಕ್ರಮಗಳ ಬಗ್ಗೆ ರೈತರು ಸಮಿತಿಯ ಗಮನ ಸೆಳೆದರು.

ತಹಸೀಲ್ದಾರ್ ಕೃಷ್ಣಮೂರ್ತಿ, ಎಸಿಎಫ್ ನವೀನ್, ಆರ್‌ಎಫ್‌ಒ ಮಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯದ್ದು ಗೋಡ್ಸೆ, ಕಾಂಗ್ರೆಸಿಗರದ್ದು ಗಾಂಧಿ ವಂಶ: ಮೌರ್ಯ
ಮೇವು ಕೊರತೆ ನೀಗಿಸಲು ಸಿದ್ಧತೆ: ಉಡುಪಿ ಡಿಸಿ ಸ್ವರೂಪ