ರೆಖ್ಯ: ಕಾಡಾನೆ ದಾಳಿಗೆ ಕಾರ್ಮಿಕ ಬಲಿ

KannadaprabhaNewsNetwork |  
Published : Aug 03, 2026, 02:45 AM IST
ಬಾಲಕೃಷ್ಣ | Kannada Prabha

ಸಾರಾಂಶ

ಇಲ್ಲಿನ ವಲಯ ಅರಣ್ಯ ಇಲಾಖಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕರೊಬ್ಬರು ಬಲಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.

ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ಇಲಾಖಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕರೊಬ್ಬರು ಬಲಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ (೫೫) ಮೃತರು.ಬಾಲಕೃಷ್ಣ ಗೌಡ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ. ಅವರು ರಾತ್ರಿ ವೇಳೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಿದಾಗ ದುರಂತ ಬೆಳಕಿಗೆ ಬಂದಿದೆ.

ಹುಡುಕಾಟದ ವೇಳೆ ಬಾಲಕೃಷ್ಣ ಗೌಡ ಅವರ ಬಳಿಯಿದ್ದ ರೈನ್‌ಕೋಟ್ ಹಾಗೂ ಟೋಪಿ ಸಂಪೂರ್ಣ ಹರಿದ ಸ್ಥಿತಿಯಲ್ಲಿ ದಾರಿಯ ಮಧ್ಯೆ ಬಿದ್ದಿರುವುದು ಕಂಡುಬಂದಿದ್ದು, ಅದರ ಸಮೀಪದಲ್ಲೇ ಕಾಡಾನೆಯ ಹೆಜ್ಜೆ ಗುರುತು ಪತ್ತೆಯಾಗಿದ್ದವು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದಾಗ ಸಮೀಪದ ಕಣಿಯೊಂದರಲ್ಲಿ ಮೃತದೇಹ ಪತ್ತೆಯಾಯಿತು.

ಭಾನುವಾರ ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಉಪವಲಯ ಅರಣ್ಯಾಧಿಕಾರಿಗಳು, ಧರ್ಮಸ್ಥಳ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಮರ್ಥ ಗಾಣಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಸಿದರು. ಮೃತದೇಹವನ್ನು ಸ್ಥಳದಲ್ಲೇ ಮಹಜರು ನಡೆಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು. ಘಟನೆ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಮೃತ ಬಾಲಕೃಷ್ಣ ಗೌಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ಡಿಎಫ್‌ಒ ರವಿಶಂಕರ್, ಎಸಿಎಫ್ ಸುಬ್ಬಯ್ಯ ನಾಯ್ಕ, ಆರ್‌ಎಫ್‌ಒ ರಾಘವೇಂದ್ರ, ಫಾರೆಸ್ಟರ್ ಯತೀಂದ್ರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಮುಖಂಡರಾದ ಬೇಬಿ ಕಿರಣ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ರೆಖ್ಯ, ಚೇತನ್ ಕೊಳೆಚ್ಚಾವು, ತಹಸೀಲ್ದಾರ್ ಎಸ್.ಎನ್. ನರಗುಂದ, ಗ್ರಾಮ ಆಡಳಿತಾಧಿಕಾರಿ ವಿಜೇತ್ ಹಾಗೂ ಪಿಡಿಒ ರಾಘವೇಂದ್ರ ಗೌಡ ಉಪಸ್ಥಿತರಿದ್ದರು. 5 ಲಕ್ಷ ರು. ಚೆಕ್‌: ಅರಣ್ಯ ಇಲಾಖೆ ವತಿಯಿಂದ ಸರ್ಕಾರದಿಂದ ಮಂಜೂರಾಗುವ ೨೦ ಲಕ್ಷ ಪರಿಹಾರ ಧನದಲ್ಲಿ ಮೊದಲ ಕಂತಾಗಿ ೫ ಲಕ್ಷ ಮೊತ್ತದ ಚೆಕ್ ಅನ್ನು ಮೃತರ ಕುಟುಂಬಕ್ಕೆ ವಿತರಿಸಲಾಯಿತು. ಉಳಿದ ೧೫ ಲಕ್ಷ ಪರಿಹಾರವನ್ನು ಶೀಘ್ರದಲ್ಲೇ ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದು ಎಂದು ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆ ತಕ್ಷಣವೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯದ್ದು ಗೋಡ್ಸೆ, ಕಾಂಗ್ರೆಸಿಗರದ್ದು ಗಾಂಧಿ ವಂಶ: ಮೌರ್ಯ
ಮೇವು ಕೊರತೆ ನೀಗಿಸಲು ಸಿದ್ಧತೆ: ಉಡುಪಿ ಡಿಸಿ ಸ್ವರೂಪ