ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ನೀಡಿ: ಹುಚ್ಚವ್ವನಹಳ್ಳಿ ಮಂಜುನಾಥ

KannadaprabhaNewsNetwork |  
Published : Feb 20, 2024, 01:49 AM IST
19ಕೆಡಿವಿಜಿ10, 11, 12-ಚನ್ನಗಿರಿ ತಾ. ನಲ್ಲೂರು ಗ್ರಾಮದಿಂದ ದಾವಣಗೆರೆ ಡಿಸಿ ಕಚೇರಿವರೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ರೈತರು, ರೈತ ಮಹಿಳೆಯರು ಪಾದಯಾತ್ರೆ ಕೈಗೊಂಡಿರುವುದು. | Kannada Prabha

ಸಾರಾಂಶ

ಸಾಸ್ವೇಹಳ್ಳಿ, ಕಮ್ಮಾರಘಟ್ಟ ಏತ ನೀರಾವರಿ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು. ಚನ್ನಗಿರಿ ತಾಲೂಕು ಗಾಣದಕಟ್ಟೆ ರಿ.ಸನಂ.1 ಮತ್ತು ಎನ್.ಗಾಣದಕಟ್ಟೆ ರಿ.ನಂ.8, ಶಿವಗಂಗೆ ಹಾಳ್ ರಿ.ಸ.ನಂ.4ರಲ್ಲಿ ಎಂಪಿಎಂ ಮಿಲ್‌ಗೆ ನೀಡಿದ ಲೀಜ್‌ ಅವಧಿ ಪೂರ್ಣವಾಗಿದ್ದು, ಜಮೀನಿನ ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಖರೀದಿಸಿದರೆ 6 ತಿಂಗಳ ಜೈಲು ಶಿಕ್ಷೆ, ಖರೀದಿದಾರನ ಪರವಾನಗಿ ರದ್ದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರದಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪಾದಯಾತ್ರೆ ಕೈಗೊಂಡಿದೆ.

ನಲ್ಲೂರು ಗ್ರಾಮದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿದ ಸಂಘಟನೆ ಪದಾಧಿಕಾರಿಗಳು, ಮುಖಂಡರು, ರೈತರು, ರೈತ ಮಹಿಳೆಯರು ಸಂಜೆ ವೇಳೆಗೆ ತ್ಯಾವಣಿಗೆ ತಲುಪಿದ್ದು, ಫೆ.20ರಂದು ಮತ್ತೆ ದಾವಣಗೆರೆಯತ್ತ ಪಾದಯಾತ್ರೆ ಆರಂಭಿಸಲಿದ್ದಾರೆ.

ಈ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ, ಸಾಸ್ವೇಹಳ್ಳಿ, ಕಮ್ಮಾರಘಟ್ಟ ಏತ ನೀರಾವರಿ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು. ಚನ್ನಗಿರಿ ತಾಲೂಕು ಗಾಣದಕಟ್ಟೆ ರಿ.ಸನಂ.1 ಮತ್ತು ಎನ್.ಗಾಣದಕಟ್ಟೆ ರಿ.ನಂ.8, ಶಿವಗಂಗೆ ಹಾಳ್ ರಿ.ಸ.ನಂ.4ರಲ್ಲಿ ಎಂಪಿಎಂ ಮಿಲ್‌ಗೆ ನೀಡಿದ ಲೀಜ್‌ ಅವಧಿ ಪೂರ್ಣವಾಗಿದ್ದು, ಜಮೀನಿನ ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಬಗರ್ ಹುಕುಂ ಅರ್ಜಿ ಫಾರಂ 50, 53 ಮತ್ತು ಈಗಾಗಲೇ 57 ಅರ್ಜಿ ಫಾರಂ ಸಲ್ಲಿಸಿದ್ದು, ತಾಲೂಕಿನಾದ್ಯಂತ ವಜಾಗೊಳಿಸಿದ್ದನ್ನು ತಕ್ಷಣ ಮರು ಪರಿಶೀಲಿಸಿ, ಹಕ್ಕುಪತ್ರ ನೀಡಬೇಕು. ರಾಜ್ಯ ಸರ್ಕಾರ ಅಕ್ರಮ ಸಕ್ರಮ ವಿದ್ಯುತ್ ಯೋಜನೆ ಪುನಾರಂಭಿಸಬೇಕು. ಅರಣ್ಯ ಭೂಮಿ ಸಾಗುವಳಿದಾರರು ಈಗಾಗಲೇ ಅರ್ಜಿ ಹಾಕಿದ್ದು, ಸಮಿತಿಗಳು ಸಣ್ಣಪುಟ್ಟ ಲೋಪದೋಷಗಳಿದ್ದ ಅರ್ಜಿಗಳನ್ನು ಅರ್ಜಿದಾರರ ಗಮನಕ್ಕೆ ತರದೇ, ತಿರಸ್ಕರಿಸುತ್ತಿವೆ. ಈ ಮಾನದಂಡ ಬದಲಿಸಿ, ಸಣ್ಣಪುಟ್ಟ ಲೋಪದೋಷ ಅರ್ಜಿದಾರರಿಗೆ ಪತ್ರದ ಮೂಲಕ ದಾಖಲೆ ನೀಡಲು ಸೂಚಿಸಿ, ಸಾಗುವಳಿದಾರರಿಗೆ ಹಕ್ಕುಪತ್ರ, ಪಹಣಿ ನೀಡಲಿ ಎಂದು ತಾಕೀತು ಮಾಡಿದರು.

ಸರ್ಕಾರ ಈಗಾಗಲೇ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಚನ್ನಗಿರಿ, ಹೊನ್ನಾಳಿ ತಾಲೂಕು ಯೋಜನೆಯಿಂದ ಕೈಬಿಡಲಾಗಿದೆ. ತಕ್ಷಣವೇ ಎರಡೂ ತಾಲೂಕನ್ನೂ ಯೋಜನೆ ವ್ಯಾಪ್ತಿಗೆ ತರಬೇಕು. ರಾಜ್ಯ ಸರ್ಕಾರ 15-20 ವರ್ಷ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದೆಂಬ ಆದೇಶವಿದ್ದರೂ, ಚನ್ನಗಿರಿ ತಾಲೂಕಿನಲ್ಲಿ ಅರಣ್ಯಾಧಿಕಾರಿಗಳು ರೈತರ ಒಕ್ಕಲೆಬ್ಬಿಸುತ್ತಿರುವುದು ತಕ್ಷಣವೇ ನಿಲ್ಲಿಸಬೇಕು ಎಂದು ಹುಚ್ಚವ್ವನ ಹಳ್ಳಿ ಮಂಜುನಾಥ ತಿಳಿಸಿದರು.

ಸಂಘಟನೆ ಮುಖಂಡರಾದ ಕೈದಾಳೆ ರವಿಕುಮಾರ, ಯಲೋದಹಳ್ಳಿ ಎಸ್.ಆರ್.ರವಿಕುಮಾರ, ನಿಟುವಳ್ಳಿ ಪೂಜಾರ ಅಂಜಿನಪ್ಪ, ಬಾಲಾಜಿ, ಅಸ್ತಾಫನಹಳ್ಳಿ ಗಂಡುಗಲಿ, ಬಸಣ್ಣ, ಕುಮಾರ, ನಾಗರಾಜ, ಕೃಷ್ಣಮೂರ್ತಿ, ಹನುಮಂತ, ಶರಣಮ್ಮ, ರಂಗನಾಥ, ಯೇಸುದಾರ, ಅಣ್ಣಪ್ಪ, ಚಿಕ್ಕನಂಜಾ, ದಾರಸೂರು, ಚಣು, ನಂದಕುಮಾರ, ಉಮೇಶ ಉಪಾಯಕನಹಳ್ಳಿ, ಲೋಕೇಶ, ರಂಗಪ್ಪ, ಬಸಣ್ಣ, ಪುನೀತಕುಮಾರ ಮಧುರ ನಾಯ್ಕನಹಳ್ಳಿ, ಕರಿಯಪ್ಪ, ಭೀಮಪ್ಪ, ಚಂದ್ರಪ್ಪ, ನಲ್ಲೂರು ಪೀರಾ ನಾಯ್ಕ ಮಧುರನಾಯ್ಕನಹಳ್ಳಿ, ಮಂಜಪ್ಪ, ಕುಮಾರ, ಪ್ರವೀಣ, ಮಂಜಪ್ಪ, ಹಿರೇಕೋಗಲೂರು ಪ್ರಕಾಶ, ಆಂಜನೇ, ತ್ಯಾವಣಿಗೆ ವೆಂಕಟೇಶ, ಮಹಾಬಲೇಶ, ಆರ್.ನಾಗರಾಜ ಇತರರಿದ್ದರು. ಜಿಲ್ಲೆಯಲ್ಲಿ ಸಾವಿರಾರು ನಿವೇಶನ ರಹಿತ ಕುಟುಂಬಗಳಿದ್ದು, ಆ ಕುಟುಂಬಗಳಿಗೆ ಸರ್ಕಾರದಿಂದ ನಿವೇಶನ ಮತ್ತು ಹಕ್ಕುಪತ್ರ ನೀಡಬೇಕು. ಜಗಳೂರು ತಾಲೂಕಿನ 57 ಕೆರೆ ನೀರನ್ನು ನೀರು ತುಂಬಿಸುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ಕೆರೆ ತುಂಬಿಸಬೇಕು. ಅಲ್ಲಿ ತುರ್ತಾಗಿ ಗೋ ಶಾಲೆ ಆರಂಭಿಸಿ, ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರೊದಗಿಸಬೇಕು.

ಹುಚ್ಚವ್ವನಹಳ್ಳಿ ಮಂಜುನಾಥ, ರಾಜ್ಯಾಧ್ಯಕ್ಷ ರೈತ ಸಂಘ

........

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ