ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ, ಅಧಿಕಾರಿಗಳು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಜುಲೈ 29ರ ವರೆಗೆ ‘ಒಂದು ತಿಂಗಳು ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ ಅರ್ಜಿ ಸ್ವೀಕಾರ ಬಂದ್’ ಎಂದು ಫಲಕ ಹಾಕಲಾಗಿದೆ. ಇದರಿಂದಾಗಿ ಸಾರ್ವಜನಿಕರು ತುರ್ತಾಗಿ ಜನನ, ಮರಣ ಪತ್ರ ಪಡೆಯಲು ಸಾಧ್ಯವಾಗದೇ ಕಂಗೆಟ್ಟಿದ್ದಾರೆ. ಪಾಲಿಕೆ ಆಡಳಿತ ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ, ಅಧಿಕಾರಿಗಳು ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಜುಲೈ 29ರ ವರೆಗೆ ‘ಒಂದು ತಿಂಗಳು ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ ಅರ್ಜಿ ಸ್ವೀಕಾರ ಬಂದ್’ ಎಂದು ಫಲಕ ಹಾಕಲಾಗಿದೆ. ಇದರಿಂದಾಗಿ ಸಾರ್ವಜನಿಕರು ತುರ್ತಾಗಿ ಜನನ, ಮರಣ ಪತ್ರ ಪಡೆಯಲು ಸಾಧ್ಯವಾಗದೇ ಕಂಗೆಟ್ಟಿದ್ದಾರೆ. ಪಾಲಿಕೆ ಆಡಳಿತ ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.
ಇಲ್ಲಿನ ಅಟಲ್ ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾಧಿಕಾರಿ ಮೂಲಕ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಕಾರ ಇನ್ನು ಒಂದು ತಿಂಗಳು ಮಂಗಳೂರಿನಲ್ಲಿ ಜನನ, ಮರಣಗಳು ಇರುವುದಿಲ್ಲವೇ? ಶಾಲಾ ಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಅಗತ್ಯವಾಗಿ ಬೇಕಿರುವ ಪೋಷಕರು ಏನು ಮಾಡಬೇಕು? ಪಾಸ್‌ಪೋರ್ಟ್ ಮಾಡಿಸಿಕೊಳ್ಳವವರು ಏನು ಮಾಡಬೇಕು? ಸಾರ್ವಜನಿಕರು ನನಗೆ ದೂರು ನೀಡುತ್ತೇವೆ ಎಂದು ಹೇಳಿದ ಕಾರಣ ಮಂಗಳವಾರ ಅರ್ಜಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಆದರೆ ಪ್ರಮಾಣ ಪತ್ರಕ್ಕೆ ಅವಸರ ಮಾಡುವಂತಿಲ್ಲ ಎಂದು ಷರತ್ತು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನರ ನಿತ್ಯ ಅಲೆದಾಟ: ಬಿಜೆಪಿ ಸರ್ಕಾರ ಇದ್ದಾಗ 5 ರು. ಇದ್ದ ಜನನ, ಮರಣ ಪ್ರಮಾಣಪತ್ರ ಶುಲ್ಕವನ್ನು ಕಾಂಗ್ರೆಸ್ ಸರ್ಕಾರ 75 ರು.ಗೆ ಏರಿಸಿದೆ. ಈಗ ಅರ್ಜಿ ಸ್ವೀಕಾರವನ್ನೇ ಬಂದ್ ಮಾಡಿದೆ. ಇನ್ನು ಒಂದು ತಿಂಗಳು ಮಂಗಳೂರಿನ ಜನರಿಂದ ಯಾವುದೇ ರೀತಿಯ ತೆರಿಗೆ ವಸೂಲಿ ಇಲ್ಲ, ಲಂಚ ಸ್ವೀಕಾರ ಮಾಡುವುದಿಲ್ಲ ಎಂದು ಪಾಲಿಕೆಯವರು ಬೋರ್ಡ್ ಹಾಕಲಿ ಎಂದು ಶಾಸಕ ವೇದವ್ಯಾಸ್ ಕಾಮತ್ ಒತ್ತಾಯಿಸಿದರು.
ಕಗ್ಗಂಟಾದ ಕನ್ವರ್ಷನ್ ಸಮಸ್ಯೆ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಈಗ ಭೂಪರಿವರ್ತನೆ (ಕನ್ವರ್ಷನ್) ಕಗ್ಗಂಟಾಗಿದ್ದು, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆಯಡಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಗುತ್ತಿದ್ದ ಭೂ ಪರಿವರ್ತನೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಈಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವಹಿಸಿಕೊಟ್ಟಿದೆ.
ಯಾವುದೇ ನಕ್ಷೆ ಇಲ್ಲದೇ ಕನ್ವರ್ಷನ್ ಮಾಡಲು ಸಾಧ್ಯವಿಲ್ಲ ಎಂದು ಮುಡಾದವರು ಹೇಳುತ್ತಾರೆ. ನಕ್ಷೆ ಮಾಡಬೇಕಾದ ಕಂದಾಯ ಇಲಾಖೆಯವರು ಸರ್ಕಾರದ ಆದೇಶದ ಪ್ರಕಾರ ನಾವು ಮಾಡುವಂತಿಲ್ಲ ಎನ್ನುತ್ತಿದ್ದಾರೆ. ಕನ್ವರ್ಷನ್ ಆಗದೇ ಯಾವುದೇ ಭೂಮಾರಾಟ ಸಾಧ್ಯವಿಲ್ಲ, ಖರೀದಿಗೂ ಯಾರೂ ಮುಂದೆ ಬರುವುದಿಲ್ಲ. ಈ ವಿಚಾರದಲ್ಲಿ ಸಾರ್ವಜನಿರು ಪರದಾಡುವಂತಾಗಿದೆ ಎಂದು ಆರೋಪಿಸಿದರು.ಈ ಬಗ್ಗೆ ಕಂದಾಯ ಇಲಾಖೆ ಸಚಿವರು, ಕಾರ್ಯದರ್ಶಿಗೆ ಪತ್ರ ನೀಡಲಾಗಿದ್ದು, ನಗರಾಭಿವೃದ್ಧಿ ಇಲಾಖೆ ಸಚಿವರು, ಕಾರ್ಯದರ್ಶಿಗೂ ಮನವಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ, ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಶಾಸಕರು ಆಗ್ರಹಿಸಿದರು.
ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಮಂಡಲದ ಪದಾಧಿಕಾರಿ ಮಂಗಳಾ ಆಚಾರ್ ಇದ್ದರು.
ಕಾಂಗ್ರೆಸ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು: ಮಂಗಳೂರಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಒಂದೇ ಕಡೆ ಜನರನ್ನು ಒಟ್ಟುಸೇರಿಸಿ ಎಸ್‌ಐಆರ್ ಫಾರಂ ವಿತರಿಸಿ ಭರ್ತಿ ಮಾಡಲಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದರು. ವಿದೇಶದಲ್ಲಿ ಇದ್ದವರ ಫಾರಂನ್ನೂ ಭರ್ತಿ ಮಾಡಿ ಸಹಿ ಮಾಡಲಾಗುತ್ತಿದೆ. ಅನರ್ಹರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಹುನ್ನಾರ ನಡೆಯುತ್ತಿದೆ. ಈ ಎಲ್ಲದರ ಬಗ್ಗೆ ದಾಖಲೆ ಇರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.