ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿನ ಅವ್ಯವಸ್ಥೆ, ಬಂದರು ನಿರ್ವಹಣೆಯಲ್ಲಿ ಇಲಾಖೆಯ ನಿರ್ಲಕ್ಷ್ಯ ಬಗ್ಗೆ ಮೀನುಗಾರರಿಂದ ವ್ಯಾಪಕ ದೂರು ಬರುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಬುಧವಾರ, ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೀನುಗಾರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿದರು.ಬಂದರು ನಿರ್ವಹಣೆಯ ಟೆಂಡರ್ ಅವಧಿ ಮುಗಿದಿದ್ದರೂ, ಹೊಸ ಟೆಂಡರ್ ಕರೆದಿಲ್ಲ, ಸ್ವಚ್ಛತೆ ಮತ್ತು ಬೀದಿದೀಪ ನಿರ್ವಹಣೆ ಮಾಡುವಂತೆ, ಭದ್ರತೆಗೆ ಗುಣಮಟ್ಟದ ಸಿಸಿಟಿವಿ ಅಳವಡಿಸುವಂತೆ ಈ ಹಿಂದೆಯೇ ಸೂಚಿಸಲಾಗಿದ್ದರೂ, ಅಧಿಕಾರಿಗಳು ಸ್ಪಂದಿಸಿಲ್ಲ, ಬಂದರು ಇಲಾಖೆಯ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ನಿರ್ಣಯ ಇದ್ದರೂ, ಖಾಸಗಿ ವ್ಯಕ್ತಿಗಳಿಗೆ ನಿಯಮ ಮೀರಿ, ಟೆಂಡರ್ ನಡೆಸದೆ ಭೂಮಿಯನ್ನು ಪರಭಾರೆ ಮಾಡಿದ್ದಾರೆ ಎಂದು ಮೀನುಗಾರ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.ಇಲ್ಲಿನ ಮಲ್ಪೆ, ತೊಟ್ಟಂ ಹಾಗೂ ಗುಜ್ಜರಬೆಟ್ಟು ಭಾಗದಲ್ಲಿ ಕಡಲ್ಕೊರೆತ ಆರಂಭವಾಗಿದ್ದು, ತಕ್ಷಣ ನಿಯಂತ್ರಣ ಕಾಮಗಾರಿ ಪ್ರಾರಂಭಿಸುವಂತೆ ಶಾಸಕರು ಹೇಳಿದರು.ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷ ದಯಾನಂದ ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕುಮಾರಸ್ವಾಮಿ, ಇಲಾಖೆಯ ಅಧಿಕಾರಿ ಸವಿತಾ ಖಾದ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಮೀನುಗಾರ ಸಂಘದ ಪದಾಧಿಕಾರಿಗಳು ಹಾಗೂ ಮೀನುಗಾರ ಮುಖಂಡರು ಇದ್ದರು.