ಕನ್ನಡಪ್ರಭ ವಾರ್ತೆ ಹನೂರು
ಬಿದರಹಳ್ಳಿ, ಎಂ.ಜಿ.ದೊಡ್ಡಿ, ಮಾರ್ಟಳ್ಳಿ ಗ್ರಾಮದಲ್ಲಿ ಒಟ್ಟು 17 ಮಂದಿ ಕ್ರಿಮಿನಾಶಕ ಬೆರೆಸಿದ್ದ ಪ್ರಸಾದ ಸೇವಿಸಿ ಅಸುನೀಗಿದ್ದರು. ಮೃತರ ಸಂಬಂಧಿಕರು ಸಮಾಧಿಗಳಿಗೆ ತೆರಳಿ ಪೂಜೆ ಸಲ್ಲಿಸುವ ವೇಳೆ ಅಗಲಿದವರನ್ನು ನೆನೆದು ಕಣ್ಣೀರಿಟ್ಟರು.
ಇನ್ನು, ದುರಂತಕ್ಕೆ ಕಾರಣವಾದ ನಾಲ್ವರು ಆರೋಪಿಗಳು ಮೈಸೂರಿನ ಜೈಲಿನಲ್ಲಿದ್ದಾರೆ.ದೇವರ ನಂಬಿಕೆಗೆ ದ್ರೋಹ ಬಗೆದ ಕೇಸ್:
2018ರ ಡಿ.14 ರಂದು ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ನಡೆದ ಘಟನೆಯಿಂದ ಬಿದರಹಳ್ಳಿ , ಎಂ.ಜಿ.ದೊಡ್ಡಿ, ಮಾರ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದೇವರ ಪ್ರಸಾದಕ್ಕೆ ವಿಷ ಬೆರೆಸಿದ್ದ ಟೊಮೊಟೋ ಬಾತ್ ತಿಂದು 17 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು 150ಕ್ಕೂ ಹೆಚ್ಚು ಜನ ಈ ವಿಷ ಪ್ರಸಾದ ಘಟನೆಯಲ್ಲಿ ಮಾರಮ್ಮನ ಭಕ್ತರು ವಿವಿಧ ನೂನ್ಯತೆಗಳಿಂದ ಹಾಗೂ ಅಂಗಾಂಗಗಳ ವೈಫಲ್ಯಗಳಿಂದ ಕೊನೆಗೂ ಬದುಕುಳಿದು ಬಂದರು.
ವಿಷ ಪ್ರಸಾದ ಪ್ರಕರಣದಲ್ಲಿ ಇನ್ನೂ ಈಡೇರದ ಭರವಸೆ:
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದಲ್ಲಿ ನೊಂದವರಿಗೆ ಸರ್ಕಾರ ನೀಡಿದ್ದ ಭರವಸೆ ಈಡೇರಿಸಬೇಕು ಹಾಗೂ ಪ್ರಕರಣದ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ತೆರೆದು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಪೆದ್ದನ ಪಾಳ್ಯ ಪಿ.ಜಿ. ಮಣಿ ಒತ್ತಾಯಿಸಿದರು.
ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣ ನಡೆದು ಆರು ವರ್ಷಗಳು ಪೂರ್ಣಗೊಂಡಿವೆ. ಆದರೆ ಸರ್ಕಾರ ನೀಡಿದ್ದ ಭರವಸೆಗಳು ಈಡೇರದೆ ಇರುವುದರಿಂದ ಬಾಧಿತರು ಇನ್ನೂ ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸುಮಾರು 600 ಕ್ಕೂ ಹೆಚ್ಚು ಸಾಕ್ಷಿದಾರರು ಇದ್ದಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಈ ಪ್ರಕರಣ ಬರುತ್ತಿ,ದೆ ಕೇವಲ ಒಂದು ಬಾರಿಗೆ ಎರಡು ಅಥವಾ ಮೂರು ಸಾಕ್ಷಿದಾರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪ್ರಕರಣ ಇತ್ಯರ್ಥವಾಗಲು ಸುಮಾರು 20 ವರ್ಷಗಳೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ನ್ಯಾಯಾಲಯ ತೆರೆದು ನೊಂದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರಾಮಲಿಂಗಂ ಮಾತನಾಡಿ, ವಿಷ ಪ್ರಸಾದ ಪ್ರಕರಣದ ಸಂದರ್ಭದಲ್ಲಿ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ 5 ಲಕ್ಷ ರು. ಪರಿಹಾರ ನೀಡಿ ಕೆಲವರಿಗೆ ಕೆಲವು ನಿಗಮಗಳಿಂದ ಸಹಾಯ ಮಾಡಿದೆ. ಅಸ್ವಸ್ಥರಾಗಿ ಚಿಕಿತ್ಸೆ ಪಡೆದುಕೊಂಡ ಬಹುತೇಕರಿಗೆ ಇನ್ನೂ ಅನಾರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಕೂಲಿ ಕೆಲಸವನ್ನು ಮಾಡಲು ಸಹ ಆಗುತ್ತಿಲ್ಲ, ಈ ಹಿನ್ನೆಲೆ ಸರ್ಕಾರ ಇವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.