ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬಿಎಸ್‌ಪಿಎಲ್ ಕಂಪನಿಯಿಂದ ಕಮಿಷನ್ ಪಡೆದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿಕೆ ಸತ್ಯಕ್ಕೆ ದೂರವಾದುದು. ಸುಳ್ಳಿನ ಕಂತೆ ಕಟ್ಟುವ ದಢೇಸೂಗೂರು ಅವರು ದಾಖಲೆ ಸಮೇತ ಕೊಪ್ಪಳದ ಗವಿಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರೆಡ್ಡಿ ಶ್ರೀನಿವಾಸ ಸವಾಲು ಹಾಕಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಂಪನಿಯಿಂದ ಕಮಿಷನ್ ಹಣ ವಸೂಲಿ ಮಾಡಿ ಈಗ ಕಾರ್ಖಾನೆ ವಿರುದ್ಧದ ಹೋರಾಟದಲ್ಲಿ ಮೌನವಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಸೋಮವಾರ ಸುದ್ದಿಗೋಷ್ಟಿಯಲ್ಲಿ ನೀಡಿದ್ದ ಹೇಳಿಕೆಗೆ ರೆಡ್ಡಿ ಶ್ರೀನಿವಾಸ ತಿರುಗೇಟು ನೀಡಿರುವುದಲ್ಲದೆ ದಢೇಸೂಗೂರು ವಿರುದ್ಧ ಕಿಡಿ ಕಾರಿದ್ದಾರೆ.ತಮ್ಮ ಬಳಿ ದಾಖಲೆ ಇದ್ದರೆ ದಾಖಲೆ ಸಮೇತ ಗವಿಮಠಕ್ಕೆ ತೆರಳಿ ಪ್ರಮಾಣಿ ಮಾಡುವಂತೆ ಆಗ್ರಹಿಸಿದ್ದಾರೆ. ಈ ರೀತಿ ಸುಳ್ಳು ಹೇಳಿಕೆ ನೀಡಿ, ಹೋರಾಟದ ದಿಕ್ಕು ತಪ್ಪಿಸುವುದು ಸರಿಯಲ್ಲ. ಇಡೀ ಕೊಪ್ಪಳ ಜಿಲ್ಲೆಯ ಜನರು ಕಾರ್ಖಾನೆಯ ವಿರುದ್ಧ ಹೋರಾಟ ಮಾಡಿದ್ದಾರೆ. ಸರ್ಕಾರವೂ ಸಹ ತಡೆ ಹಿಡಿದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಜನರ ಮತ್ತು ಗವಿಮಠ ಶ್ರೀಗಳ ಅಭಿಪ್ರಾಯಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ವಾಸ್ತವ ಹೀಗಿದ್ದರೂ ಈ ರೀತಿ ಹೇಳಿಕೆ ನೀಡುವ ಮೊದಲು ಯೋಚನೆ ಮಾಡಬೇಕಾಗಿತ್ತು. ಇಂಥ ಸುಳ್ಳಿನ ಕಂತೆಯಿಂದ ಜನರ ದಿಕ್ಕು ತಪ್ಪಿಸುವುದನ್ನು ಬಿಡಬೇಕು ಎಂದಿದ್ದಾರೆ.
೨೦೧೮ ರಲ್ಲಿ ಕನಕಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಿತಿಮೀರಿದ ಭ್ರಷ್ಟಾಚಾರ ಮಾಡಿದ್ದರಿಂದಲೇ 2023 ರಲ್ಲಿ ಜನರು ತಿರಸ್ಕರಿಸಿದ್ದಾರೆ. ಜನರು ಆಯ್ಕೆ ಮಾಡಿದ ಶಿವರಾಜ ತಂಗಡಗಿ ಅವರು ಸಚಿವರಾಗಿ ಕ್ಷೇತ್ರ ಮತ್ತು ರಾಜ್ಯಕ್ಕೆ ಅತ್ಯುತ್ತಮ ಕೆಲಸ ಮಾಡಿದ್ದಾರೆ.ಜನರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ತಂಗಡಗಿ ಅವರನ್ನು ಕ್ಷೇತ್ರದ ಜನತೆ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದಢೇಸೂಗೂರು ಸಚಿವರ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂಬುದನ್ನು ಅರಿತು ಅವರ ಪಕ್ಷದ ಮುಖಂಡರೇ ಅಲ್ಲಿಂದ ಎದ್ದು ಹೋಗಿದ್ದಾರೆ.
ರಾಜಕೀಯ ಮಾತನಾಡುವ ದಢೇಸೂಗೂರು ಅವರು ವಿನಾಕಾರಣ ಗವಿಸಿದ್ಧೇಶ್ವರ ಸ್ವಾಮಿಗಳ ಹೆಸರನ್ನು ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.