ಹಾವೇರಿ: ಸ್ವಚ್ಛತೆ, ಪರಿಸರ ಹಾಗೂ ನಗರದ ಆರೋಗ್ಯವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ. ಪೌರ ಕಾರ್ಮಿಕರು ಇತರರಂತೆ ಮನುಷ್ಯರಾಗಿದ್ದು, ಅವರನ್ನು ಕೀಳಾಗಿ ಕಾಣದೇ ಗೌರವ ನೀಡಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಹೇಳಿದರು.ನಗರದ ಸಿಂದಗಿ ಶಾಂತವೀರೇಶ್ವರ ಕಲ್ಯಾಣ ಮಂಟಪದಲ್ಲಿ ಪೌರಾಡಳಿತ ಇಲಾಖೆ, ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪೌರ ಕಾರ್ಮಿಕರು ಊರಿನ ಸೇನಾನಿಗಳು ಇದ್ದಂತೆ. ಪಟ್ಟಣ ಹಾಗೂ ನಗರಗಳಲ್ಲಿ ನೈರ್ಮಲ್ಯವನ್ನು ಕಾಪಾಡುವುದರಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದಾಗಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿದಿನ ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡುವುದರ ಜತೆಗೆ ಮನೆಮನೆಗೆ ತೆರಳಿ ತಳ್ಳುಗಾಡಿಗಳಲ್ಲಿ ಕಸ ಸಂಗ್ರಹಿಸುತ್ತಾರೆ. ನಗರ ಸ್ವಚ್ಛಗೊಂಡರೆ ಅದು ಪೌರ ಕಾರ್ಮಿಕರ ಶ್ರಮದಿಂದ ಎಂಬುದನ್ನು ಮರೆಯಬಾರದು. ನಗರ ಆರೋಗ್ಯ ಇದ್ದರೆ ನಗರದ ನಿವಾಸಿಗಳು ಆರೋಗ್ಯವಾಗಿರುತ್ತಾರೆ. ಪೌರ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ನಗರಸಭೆಯಿಂದ ಗ್ರಂಥಾಲಯ ನಿರ್ಮಾಣಕ್ಕೆ ಜಾಗವನ್ನು ಮೀಸಲಾಗಿ ಇಡಲಾಗಿತ್ತು, ಅದರ ಬದಲಿಗೆ ಮುಂದಿನ ಸಭೆಯಲ್ಲಿ ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಪೌರ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಾಣ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ದೇಶದಲ್ಲಿ ಗಡಿ ಕಾಯುವ ಯೋಧರನ್ನು ಹೇಗೆ ಗೌರವದಿಂದ ಕಾಣುತ್ತೇವೋ ಅದೇರೀತಿ ನಗರ ಸೌಂದರ್ಯವನ್ನು ಹೆಚ್ಚಿಸಲು ನಿರಂತರ ಸೇವೆ ಮಾಡುವ ಪೌರ ಕಾರ್ಮಿಕರಿಗೂ ಗೌರವ ನೀಡಬೇಕು. ಪೌರ ಕಾರ್ಮಿಕರ ಬೆನ್ನಿಗೆ ನಗರಸಭೆ ಯಾವಾಗಲೂ ಇರುತ್ತದೆ. ಸಿಎಂ ಸಿದ್ದರಾಮಯ್ಯ ಕೂಡ ಹಂತ ಹಂತವಾಗಿ ಪೌರ ಕಾರ್ಮಿಕರನ್ನು ಕಾಯಂ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಮಕ್ಕಳಿಗೆ ಹಾಸ್ಟೆಲ್, ವಿದ್ಯಾಭ್ಯಾಸ ಕಿಟ್, ವಿದೇಶಿ ಶಿಕ್ಷಣಕ್ಕೆ 40 ಲಕ್ಷ ಪ್ರೋತ್ಸಾಹಧನ ಕೊಡುತ್ತಿದ್ದು, ಮಕ್ಕಳನ್ನು ಓದಿಸಬೇಕು ಎಂದರು. ಅಲ್ಲದೇ ಕೆಲವು ಪೌರ ಕಾರ್ಮಿಕರು ಕೆಲಸದಲ್ಲಿ ಮೈಗಳ್ಳತನ ಬಿಟ್ಟು ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು. ಈ ವೇಳೆ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ದಲಿತ ಸಂಘಟನೆಗಳ ಮುಖಂಡರಾದ ಉಡಚಪ್ಪ ಮಾಳಗಿ, ಸುಭಾಸ್ ಬೆಂಗಳೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಯೋಜನಾ ನಿರ್ದೇಶಕ ಚಂದ್ರಪ್ಪ, ಪೌರಾಯುಕ್ತ ಕಾಂತರಾಜು ಎಚ್., ಸಹಾಯಕ ಎಂಜನೀಯರ್ ಮತ್ತಿಕಟ್ಟಿ, ಸದಸ್ಯರಾದ ಶಿವಯೋಗಿ ಹುಲಿಕಂತಿಮಠ, ಪ್ರಸನ್ನ ಧಾರವಾಡಕರ್, ಪೀರಸಾಬ್ ಚೋಪದಾರ, ಚನ್ನಮ್ಮ ಬ್ಯಾಡಗಿ, ಪೂಜಾ ಹಿರೇಮಠ, ದೀಪಾ ಹೇರೂರ, ವಿಶಾಲಾಕ್ಷಿ ಆನವಟ್ಟಿ, ರೇಣುಕಾ ಪುತ್ರನ್ನ, ರಜೀಯಾಬೇಗಂ ದೇವಿಹೊಸೂರ, ಚೈತ್ರಾ ಹತ್ತಿ, ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ, ಸಿಬ್ಬಂದಿಗಳಾದ ರೂಪಾ ನಾಯ್ಕ, ತಬಸುಂ, ಪರಿಮಳಾ ಸೇರಿದಂತೆ ಇತರರು ಇದ್ದರು. ಶೋಭಾ ಉದಗಟ್ಟಿ ಹಾಗೂ ಮಧುಮತಿ ಸುಂಕಾಪುರ ನಿರ್ವಹಿಸಿದರು.ಪೌರಕಾರ್ಮಿಕರ ಬೇಡಿಕೆಗಳು.. ಪೌರ ಕಾರ್ಮಿಕರಾಗಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ವಸತಿ ಮನೆ ಸೌಲಭ್ಯ ಕೊಡಬೇಕು. ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೆಚ್ಚಿನ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ನಗರದಲ್ಲಿ ಪೌರ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು. ಸರ್ಕಾರಿ ಸೌಲಭ್ಯ ಪಡೆಯಲು ಪೌರ ಕಾರ್ಮಿಕರಿಗೆ ಸಫಾಯಿ ಕರ್ಮಚಾರಿ ಎಂದು ಪ್ರಮಾಣ ಪತ್ರ ನೀಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕ್ರಮದಲ್ಲಿ ಒತ್ತಾಯಿಸಿದರು.