ಬ್ಯಾಡಗಿ: ಅನ್ಯ ಭಾಷೆ ಮತ್ತು ಸಂಸ್ಕೃತಿ ದಾಳಿಯಿಂದ ನಮ್ಮ ಕನ್ನಡ ಸಂಸ್ಕೃತಿ ರಕ್ಷಿಸಿಕೊಳ್ಳುವುದು ಅನಿವಾರ್ಯ ಎಂದು ನಿವೃತ್ತ ಡಿಡಿಪಿಐ, ಸಾಹಿತಿ ಪ್ರಕಾಶ ಮನ್ನಂಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆಶ್ರಯದಲ್ಲಿ ಎಸ್‌ಎಸ್‌ಪಿಎನ್ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಜರುಗಿದ ಮಾಗನೂರ ಬಸಪ್ಪ ಅವರ ವಚನಕಾರರು ಪ್ರತಿಪಾದಿಸಿದ ಜೀವನ ಮೌಲ್ಯ ಮತ್ತು ವಚನಗಾಯನ ಹಾಗೂ ಶಿವನಾಗಪ್ಪ ಕೊಟ್ರಪ್ಪ ಮೇಲ್ಮುರಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯಭಾಷೆ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ಕನ್ನಡಿಗರು ವಿಫಲವಾಗುತ್ತಿದ್ದೇವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಗೆ ಯಥೇಚ್ಛವಾಗಿ ಬೆದರಿಕೆಗಳಿವೆ. ಭಾಷೆ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ವ್ಯಾಪಕವಾಗಿ ಕನ್ನಡವನ್ನು ಬಳಸಬೇಕಾಗಿದೆ. ಇದಕ್ಕಾಗಿ ಸರ್ಕಾರ ಬಲವಾಗಿ ಬೆಂಬಲವನ್ನು ನೀಡಬೇಕಾಗಿದೆ. ಕಂಗ್ಲಿಷ್ ಶಾಲೆಗಳು ಉದಯದಿಂದಾಗಿ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕನ್ನಡ ಇನ್ನಿಲ್ಲದಂತಾಗುತ್ತಿದೆ. ಇದರಿಂದ ನಮ್ಮ ಭಾಷೆ ಕೇವಲ ಮನೆಗಳಿಗೆ ಸೀಮಿತವಾಗುತ್ತಿದೆ ಎಂದರು.ಕನ್ನಡ ಕಡ್ಡಾಯವಾಗಲಿ: ಕಸಾಪ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಲಿಂಗಯ್ಯ ಮಾತನಾಡಿ, ಸರ್ಕಾರದ ನಿಲುವುಗಳಲ್ಲಿಯೇ ಗೊಂದಲವಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಿದ್ದರಿಂದ ಅನ್ಯ ಭಾಷಿಕರು ಕನ್ನಡವನ್ನು ಕಲಿಯಲು ಹಿಂದೇಟು ಹಾಕುತ್ತಿದ್ದಾರೆ. ಕನಿಷ್ಠ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂಬುದು ಕಸಾಪ ಹಕ್ಕೊತ್ತಾಯ. ಆದರೆ ಈ ಜಾಗದಲ್ಲಿ ಇಂಗ್ಲಿಷ್ ಆಕ್ರಮಿಸಿದ್ದು, ಮೂರನೇ ಭಾಷೆಯಾಗಿ ಹಿಂದಿ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ಭಾಷಿಕರಿಗೆ ಉದ್ಯೋಗದಲ್ಲಿ ಕನ್ನಡ ಕಡ್ಡಾಯ ಮಾಡಿದಲ್ಲಿ ಪ್ರತಿಯೊಬ್ಬರ ಜೀವನೋಪಾಯದ ಭಾಷೆ ಕನ್ನಡವಾಗಲಿದೆ ಎಂದರು.
ವಚನಕಾರರ ಸಂವಿಧಾನ: ಶಿಕ್ಷಕ ಎಸ್.ಪಿ. ಮಠದ ಮಾತನಾಡಿ, ಎಂಟನೂರು ವರ್ಷಗಳ ಹಿಂದೆಯೇ ವಚನಾಕಾರರು ಅಲಿಖಿತ ಸಂವಿಧಾನ ನೀಡಿದ್ದಾರೆ. ಆದರೆ ನಾವು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಮೂಢನಂಬಿಕೆ ಜಾತಿ ಧರ್ಮಗಳ ನಡುವಿನ ಅಸಮಾನತೆ ಹೋಗಲಾಡಿಸಿ ಸಮಾಜದಲ್ಲಿ ಸಮಾನತೆಯನ್ನು ರೂಪಿಸುವಲ್ಲಿ ವಚನಕಾರರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ ಎಂದರು.ಇದಕ್ಕೂ ಮುನ್ನ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಮಾಗನೂರ ಬಸಪ್ಪನವರ ಜೀವನ ಸಾಧನೆ ಕುರಿತು ಮಾತನಾಡಿದರು, ಶಿವನಾಗಪ್ಪ ಕೊಟ್ರಪ್ಪ ಮೇಲ್ಮುರಿ ಹೆಸರಿನಲ್ಲಿ ದತ್ತಿ ಕುರಿತು 12ನೇ ಶತಮಾನದ ಬಸವಾದಿ ಶರಣರ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ದೆಯಲ್ಲಿ ಅಕ್ಷತಾ ಹಾವನೂರ, ಚೇತನಾ ಹೊಂಡದ, ಕಾವ್ಯಾ ಹಳೇರಿತ್ತಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.
ಸಂಸ್ಥೆಯ ಚೇರ್‌ಮನ್ ಚಂದ್ರಣ್ಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ದತ್ತಿದಾನಿ ಬಸವರಾಜ ಮೇಲ್ಮುರಿ, ಗಂಗಾಂಬಿಕಾ ಪಾಟೀಲ, ಗಿರೀಶಸ್ವಾಮಿ ಇಂಡಿಮಠ, ಉಪಪ್ರಾಚಾರ್ಯ ಸುಭಾಸ್ ಯಲಿ, ಶಿಕ್ಷಕ ಪಿ.ಪಿ. ಕರಿಯಣ್ಣನವರ, ಶಾಂತರಾಜ, ಪ್ರವೀಣ ಇಂಗಳೆ ಇನ್ನಿತರರಿದ್ದರು.