ಶಿವಾನಂದ ಗೊಂಬಿ
ಹುಬ್ಬಳ್ಳಿ: ರೈಲ್ವೆಯಲ್ಲಿ ಪೋರ್ಟಲ್ ಮೂಲಕ ತತ್ಕಾಲ್ ಟಿಕೆಟ್ ಪಡೆಯುವುದು ಸಾಧ್ಯವೇ ಇಲ್ಲ. ಇದು ಏಜೆಂಟರ ದೊಡ್ಡ ಲಾಬಿಯತ್ತ ಬೊಟ್ಟು ಮಾಡುತ್ತಿದೆ!ಇಂಥ ಪ್ರಶ್ನೆಯೀಗ ರೈಲ್ವೆ ಪ್ರಯಾಣಿಕರಿಂದ ಕೇಳಿ ಬರುತ್ತಿವೆ. ಹಾಗಂತ ಇದು ಇತ್ತೀಚಿಗಷ್ಟೇ ಕೇಳಿ ಬರುತ್ತಿರುವ ಪ್ರಶ್ನೆಯಲ್ಲ. ಪೋರ್ಟಲ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾದ ದಿನದಿಂದಲೇ ಈ ರೀತಿ ಪ್ರಶ್ನೆಗಳು ಸಹಜವಾಗಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅದೇ ರೀತಿ "ಐಆರ್‌ಸಿಟಿಸಿ " ವೆಬ್ ಕೂಡ ವರ್ಕ್ ಆಗುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಏನಿದು ತತ್ಕಾಲ್?ರೈಲ್ವೆ ಟಿಕೆಟ್ ಬುಕ್ ಮಾಡಲು ಐಆರ್‌ಸಿಟಿಸಿ ವೆಬ್‌ನ್ನೇ ಹೆಚ್ಚಿನ ಜನಬಳಸುತ್ತಾರೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಜವಾಬ್ದಾರಿ ಕೂಡ ಐಆರ್‌ಸಿಟಿಸಿಯೇ ಹೊತ್ತಿದೆ. ಟಿಕೆಟ್ ಬುಕ್ಕಿಂಗ್‌ನಲ್ಲಿ ಜನರಲ್, ಲೇಡಿಸ್, ಪಸರ್ನಲ್ ಡಿಸೆಬಲ್ಟಿ, ಸಿನಿಯರ್ ಸಿಟಿಜನ್ ಹೀಗೆ ಬುಕ್ಕಿಂಗ್ ಮಾಡಬಹುದಾಗಿದೆ. ಸಾಮಾನ್ಯ ಟಿಕೆಟ್ ಸಿಗದಿದ್ದರೆ, ರೈಲು ಬಿಡುವ ಹಿಂದಿನ ದಿನ ಬೆಳಗ್ಗೆ 10ರಿಂದ ರೈಲ್ವೆ ನಿಲ್ದಾಣದಲ್ಲಿ ಭೌತಿಕವಾಗಿ ಹಾಗೂ 11ಗಂಟೆಯಿಂದ ಆನ್‌ಲೈನ್ ಮೂಲಕ ತತ್ಕಾಲ್ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ನೀಡಿದೆ. ರೈಲ್ವೆ ನಿಲ್ದಾಣದಲ್ಲಿ ಭೌತಿಕವಾಗಿ ತತ್ಕಾಲ್‌ನಲ್ಲಿ ಟಿಕೆಟ್ ಪಡೆದುಕೊಳ್ಳುವುದು ಸಲೀಸು. ಆದರೆ ಆನ್‌ಲೈನ್‌ನಲ್ಲಿ ಮಾತ್ರ ಪ್ರಯಾಣಿಕರು ನೇರವಾಗಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವುದು ಕಷ್ಟವೇ ಆಗಿದೆ. ಅದರಲ್ಲೂ ಕೆಲವೊಂದು ಬಹುಬೇಡಿಕೆಯ ರೈಲುಗಳಲ್ಲಿ ಮಾತ್ರ ತತ್ಕಾಲ್ ಟಿಕೆಟ್ ಪಡೆಯುವುದು ಸಾಧ್ಯವೇ ಇಲ್ಲ.
10.55ಕ್ಕೆ ಟ್ರೈ ಮಾಡಿದರೆ 11ಗಂಟೆಗೆ ವೆಬ್ ಒಪನ್ ಆಗುತ್ತದೆ ಎಂದು ಬರುತ್ತದೆ. ಇನ್ನು 11 ಗಂಟೆ ಆಗುತ್ತಿದ್ದಂತೆ ವೇಟಿಂಗ್ ಲಿಸ್ಟ್ ಅಂತ ಬರುತ್ತದೆ. ಅದ್ಹೇಗೆ ನಾಲ್ಕೈದು ಸೆಕೆಂಡ್‌ನಲ್ಲಿ ಬುಕ್ಕಿಂಗ್ ಮುಗಿದು ಹೋಗುತ್ತದೆ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಸಹಜವಾಗಿ ಕಾಡುತ್ತಿದೆ. ಆದರೆ, ರೈಲ್ವೆ ಇಲಾಖೆ ಅಧಿಕಾರಿಗಳು "ಇಡೀ ದೇಶದಲ್ಲಿ ಎಷ್ಟೊಂದು ಜನರು ಇದಕ್ಕಾಗಿ ಕಾಯುತ್ತಿರುತ್ತಾರೆ. ಹೀಗಾಗಿ, ಟಿಕೆಟ್‌ಗಳೆಲ್ಲ ಖಾಲಿಯಾಗಿ ಬಿಡುತ್ತವೆ " ಎಂಬ ಸಿದ್ಧ ಉತ್ತರ ನೀಡುವುದು ಮಾಮೂಲಾಗಿದೆ.ಆದರೆ, ಏಜೆಂಟರ ಬಳಿ ನೀವು ಯಾವುದೇ ಸಮಯಕ್ಕೂ ಹೋದರೂ ತತ್ಕಾಲ್‌ನಲ್ಲೇ ಟಿಕೆಟ್ ಬುಕ್ ಆಗುತ್ತದೆ. ಅದ್ಹೇಗೆ? ಅವರು ಮಾಡಬಹುದಾದರೆ ಸಾಮಾನ್ಯ ಜನರಿಗೇಕೆ ತತ್ಕಾಲ್‌ನಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಅಸಲಿಯತ್ತು ಏನೆಂದರೆ ತತ್ಕಾಲ್ ಬುಕ್ಕಿಂಗ್ ಆರಂಭ ಆಗುತ್ತಿದ್ದಂತೆ ಕೆಲ ಸೀಟ್‌ಗಳನ್ನು ಬ್ಲಾಕ್ ಮಾಡಿ ಇಟ್ಟುಕೊಳ್ಳುತ್ತಾರೆ. ಆ ಮೇಲೆ ಸಂಜೆವರೆಗೂ ಅಥವಾ ರೈಲು ಬಿಡುವವರೆಗೂ ಬುಕ್ ಮಾಡಿಕೊಡುತ್ತಲೇ ಇರುತ್ತಾರೆ. ಇಲ್ಲಿ ದೊಡ್ಡ ಲಾಬಿ ಇದೆ. ಇದರಲ್ಲಿ ಏಜೆಂಟರಿಗೆ ಕೆಲ ಸಿಬ್ಬಂದಿ ವರ್ಗ ಕೂಡ ಸಾಥ್ ನೀಡುತ್ತದೆ ಎಂಬ ಆರೋಪ ಕೂಡ ಕೇಳಿ ಬರುತ್ತದೆ.
ಈ ಬ್ಲಾಕಿಂಗ್ ಸಿಸ್ಟಂ ಹೋಗಬೇಕು. ಸಾಮಾನ್ಯ ಜನರಿಗೂ ತತ್ಕಾಲ್‌ನಲ್ಲೇ ಟಿಕೆಟ್ ಬುಕ್ಕಿಂಗ್ ಮಾಡುವಂತೆ ಆಗಬೇಕು ಎಂಬುದು ಸಾಮಾನ್ಯರ ಆಗ್ರಹ. ಈ ಬಗ್ಗೆ ರೈಲ್ವೆ ಬಳಕೆದಾರರ ಸಂಘದ ಸದಸ್ಯರೊಬ್ಬರು, ಬಳಕೆದಾರರ ಸಭೆಯಲ್ಲಿ ಪ್ರಸ್ತಾಪಿಸಿದ್ದುಂಟು. ಆದರೆ ಇದಕ್ಕೇನು ಪುರಾವೆ ಎಂಬ ಪ್ರಶ್ನೆ ಕೂಡ ಕೇಳಿ ಬಂದಿದಂತೆ. ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದೆ. ಗಪ್‌ಚುಪಾಗಿ ಬ್ಲಾಕ್ ಮಾಡಿಟ್ಟುಕೊಳ್ಳುವುದು. ಅದಕ್ಕೆ ಸಿಬ್ಬಂದಿ ವರ್ಗ ಶಾಮೀಲಾಗಿದ್ದರೆ ಅಂಥವುಗಳನ್ನು ತಡೆ ಹಿಡಿಯುವ ಕೆಲಸ ಆಗಬೇಕು ಎಂಬ ಆಗ್ರಹ. ತತ್ಕಾಲ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ನಿಂದ ಸಾರ್ವಜನಿಕರಿಗೂ ಟಿಕೆಟ್ ಸಿಗುವಂತಾಗಬೇಕೆಂಬುದು ಸಾರ್ವಜನಿಕರ ಒತ್ತಾಸೆ ಸತ್ಯ.ಸುಲಭದ ಮಾತಲ್ಲಯಾವುದೇ ರೈಲಿಗಾಗಲಿ ಆನ್‌ಲೈನ್ ಮೂಲಕ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಬಹುಬೇಡಿಕೆ ರೈಲಿದ್ದರಂತೂ ಸಾಧ್ಯವೇ ಇಲ್ಲ. ಆದರೆ ಏಜೆಂಟರ ಬಳಿ ಮಾತ್ರ ಸಂಜೆ ಅಷ್ಟೇ ಅಲ್ಲ, ರೈಲು ಬಿಡುವ ಒಂದೆರಡ್ಮೂರು ಗಂಟೆವರೆಗೂ ಟಿಕೆಟ್ ಬುಕ್ ಮಾಡಲು ಅವಕಾಶವಿರುತ್ತದೆ. ಅದ್ಹೇಗೆ ಸಾಧ್ಯ? ಇದರಿಂದಲೇ ದೊಡ್ಡ ಲಾಬಿ ಇದೆ ಎಂಬುದು ಗೊತ್ತಾಗುತ್ತೆ.
- ಮಂಜುನಾಥ ಕೆ., ಪ್ರಯಾಣಿಕ