ಕನ್ನಡಪ್ರಭ ವಾರ್ತೆ ಕೋಲಾರ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಅದರ ಮಹತ್ವ ಮತ್ತು ಧ್ಯೇಯೋದ್ದೇಶಗಳ ಕುರಿತು ಸಮಾಜದ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.ಭಾರತದ ಸಂವಿಧಾನ ಅಂಗೀಕರವಾಗಿ ೭೫ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಅರಾಭಿಕೊತ್ತನೂರು ಗ್ರಾಮಕ್ಕೆ ಆಗಮಿಸಿದ ‘ಸಂವಿಧಾನ ಜಾಗೃತಿ ಜಾಥಾ’ಗೆ ಜನತೆ ಪೂರ್ಣಕುಂಭ ಸ್ವಾಗತ ನೀಡಿದ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂವಿಧಾನದ ಆಶಯ ಪ್ರಚಾರಜ.೨೬ ರಿಂದ ಫೆ.೨೬ರವರೆಗೆ ಜಿಲ್ಲೆಯ ೧೫೬ ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಹಾಗೂ ಸ್ತಬ್ಧ ಚಿತ್ರಗಳ ಮೂಲಕ ಸಂವಿಧಾನ ಆಶಯ ಮತ್ತು ಮೌಲ್ಯಗಳನ್ನು ಹಾಗೂ ಸರ್ಕಾರದ ಕಾರ್ಯಕ್ರಮವನ್ನುಳಗೊಂಡ ಎಲ್.ಇ.ಡಿ.ವಾಹನದಲ್ಲಿ ಪ್ರಚಾರ ಮಾಡುತ್ತಿದ್ದು, ಸಂವಿಧಾನದಡಿ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಾಹಿತಿ ಪಡೆಯುವ ಮೂಲಕ ಇದರ ಸದುಪಯೋಗ ಜನತೆ ಪಡೆಯಬೇಕು ಎಂದರು.
ವಿದ್ಯಾರ್ಥಿಗಳಿಂದ ಸಂವಿಧಾನದ ಅರಿವುತಾಲ್ಲೂಕು ಪ್ರಧಾನಮಂತ್ರಿ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಸುಬ್ರಮಣಿ ಮಾತನಾಡಿ, ಮೊದಲು ಮಕ್ಕಳಿಗೆ ಸಂವಿಧಾನದ ಕುರಿತು ಅರಿವು ಮೂಡಿಸಿದರೆ ಅದು ಅವರ ಮೂಲಕ ಪೋಷಕರಿಗೂ ತಲುಪುತ್ತದೆ ಎಂದು ತಿಳಿಸಿ, ಈ ದೇಶದಲ್ಲಿ ಹುಟ್ಟಿದ ಪ್ರತಿಯಬ್ಬರೂ ಸಂವಿಧಾನವನ್ನು ಗೌರವಿಸಬೇಕು, ಅದರಡಿ ರಚಿತವಾದ ಕಾನೂನುಗಳಡಿ ನಡೆಯಬೇಕು ಎಂದರು.ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪ ಮಾತನಾಡಿ, ನಮ್ಮ ಗಣತಂತ್ರ ವ್ಯವಸ್ಥೆಯನ್ನು ಸುಭದ್ರವಾಗಿರಿಸಲು ನಮ್ಮ ಗಡಿಯಲ್ಲಿ ಕಾಯುವ ಯೋಧರ ತ್ಯಾಗ ಬಲಿದಾನಗಳನ್ನು ನಾವು ಗೌರವಿಸಬೇಕು. ನಮ್ಮ ಯೋಧರ ಧೈರ್ಯ ನಮ್ಮ ಅನ್ನದಾತರ ಸಂಯಮ ನಮಗಿಂದು ಆದರ್ಶಗಳಾಗಬೇಕು ಎಂದರು.
ಐತಿಹಾಸಿಕ ದಿನ:ಗ್ರಾಮ ಪಂಚಾಯಿತಿ ಪಿಡಿಒ ಶಾಲಿನಿ ಮಾತನಾಡಿ, ದೇಶದ ಇತಿಹಾಸದಲ್ಲಿ ಸಂವಿಧಾನ ಜಾರಿಯಾಗಿ ಗಣರಾಜ್ಯ ರೂಪಿತವಾದ ಜನವರಿ ೨೬ ನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಸ್ವಾತಂತ್ರ ಭಾರತವು ತನ್ನದೇ ಆದ ಸಂವಿಧಾನವನ್ನು ಅನುಷ್ಟಾನಕ್ಕೆ ತಂದು ಕಾನೂನು ಚೌಕಟ್ಟನ್ನು ರೂಪಿಸಿದ ಈ ದಿನ ನಮ್ಮೆಲ್ಲರಿಗೂ ಐತಿಹಾಸಿಕವಾಗಿದೆ ಎಂದರು.ಸಂವಿಧಾನದ ಕುರಿತು ಶಿಕ್ಷಕ ವೆಂಕಟರೆಡ್ಡಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಮುನಿಯಪ್ಪ, ಗ್ರಾ.ಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಉಪಾಧ್ಯಕ್ಷ ನಾಗೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ಪ್ರಸನ್ನಕುಮಾರ್,ನಾರಾಯಣಸ್ವಾಮಿ, ಚಿಕ್ಕನಂಜಪ್ಪ, ಕಾರ್ಯದರ್ಶಿ ಪ್ರಮೀಳಾ, ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕರಾದ ಸುಮಾ, ಭಾರತಿ ಮಂಜುಳಾ ಮತ್ತಿತರರಿದ್ದರು.