ರಾಣಿಬೆನ್ನೂರು: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಜ್ಞಾನ ಪರಂಪರೆ, ಮೌಲ್ಯಗಳು, ಸಂಸ್ಕಾರ ಹಾಗೂ ಜೀವನದರ್ಶನವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣವನ್ನು ಹೆಚ್ಚು ಅರ್ಥಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.
ಭಾರತವು ಪ್ರಾಚೀನ ಕಾಲದಿಂದಲೂ ಜ್ಞಾನ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ದೇಶವಾಗಿದೆ. ನಮ್ಮ ಗುರುಕುಲ ಶಿಕ್ಷಣ ಪದ್ಧತಿ ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗಿರದೆ, ವ್ಯಕ್ತಿಯ ಸರ್ವಾಂಗೀಣ ವಿಕಸನಕ್ಕೆ ಆದ್ಯತೆ ನೀಡುತ್ತಿತ್ತು. ಆದರೆ ಪರಕೀಯರ ಆಕ್ರಮಣಗಳು ಹಾಗೂ ಮೆಕಾಲೆ ಶಿಕ್ಷಣ ಪದ್ಧತಿಯ ಪ್ರಭಾವದಿಂದ ಭಾರತೀಯ ಶಿಕ್ಷಣದ ಮೂಲ ಆಶಯಗಳು ಹಿಂದೆ ಸರಿದವು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಬೋಧಿಸುವುದಕ್ಕೆ ಸೀಮಿತವಾಗದೆ, ಭಾರತೀಯ ಚಿಂತನೆ ಮತ್ತು ಜ್ಞಾನ ಪರಂಪರೆಯನ್ನು ಇಂದಿನ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಶಿಕ್ಷಕರು ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ವಿಸ್ತರಿಸಿಕೊಂಡು, ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ಸ್ವಾಭಿಮಾನ ಹಾಗೂ ಭಾರತೀಯತೆಯ ಭಾವನೆ ಬೆಳೆಸಬೇಕು ಎಂದು ಕರೆ ನೀಡಿದರು.
ವಕ್ತಾರ ವಿನಾಯಕ ಭಟ್ ಮಾತನಾಡಿ, ಇಂದಿನ ಶಿಕ್ಷಣವು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿರಬೇಕು. ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆ, ಪದವಿ ಹಾಗೂ ಉದ್ಯೋಗ ಪಡೆಯುವುದಷ್ಟೇ ಅಲ್ಲ. ಅದು ವ್ಯಕ್ತಿಯ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವಿಕಸನಕ್ಕೆ ಪೂರಕವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಮೌಲ್ಯ ಶಿಕ್ಷಣ, ಸಂಸ್ಕಾರ, ಕಲೆ, ಸಂಗೀತ, ಕ್ರೀಡೆ, ಶಾರೀರಿಕ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ತು ಕಳೆದ 60 ವರ್ಷಗಳಿಂದ ನಿರಂತರವಾಗಿ ಸಮಾಜದ ನಡುವೆ ರಾಷ್ಟ್ರೀಯ ಚಿಂತನೆ, ಭಾರತೀಯ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ಶಿಕ್ಷಕರ ನಡುವೆ ಪ್ರಶಿಕ್ಷಣ ಭಾರತಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸೃಜನಾತ್ಮಕ ಹಾಗೂ ಮೌಲ್ಯಾಧಾರಿತ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಇಂತಹ ಸಂಘಟನಾತ್ಮಕ ಪ್ರಯತ್ನಗಳು ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಬಲ ನೀಡಲಿವೆ ಎಂದರು.
ಪ್ರಶಿಕ್ಷಣ ಭಾರತಿ ಹಾವೇರಿ ಜಿಲ್ಲಾ ಸಹ ಸಂಚಾಲಕ ಡಾ. ಮೃತ್ಯುಂಜಯ ಎಂ.ಎಂ., ಪ್ರಶಿಕ್ಷಣ ಭಾರತಿ ವಿಭಾಗ ಸಂಯೋಜಕರಾ ರಾಘವೇಂದ್ರ ಪಿ., ಡಾ. ಬಸವರಾಜ ಕೇಲಗಾರ, ದೀಪಾ, ರಾಷ್ಟ್ರೋತ್ಥಾನ ಪರಿಷತ್ತಿನ ವಿವಿಧ ಜವಾಬ್ದಾರಿಯುತ ಕಾರ್ಯಕರ್ತರು ಹಾಗೂ ಹಾವೇರಿ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.