ಬಸವರಾಜ ಸರೂರ
ನಗರದಲ್ಲಿನ ಹಲವು ರಸ್ತೆಗಳು ಹದಗೆಟ್ಟು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ರಸ್ತೆಗಳಲ್ಲಿನ ಬೃಹತ್ ಗಾತ್ರದ ಗುಂಡಿಗಳು ಅಪಘಾತಗಳಿಗೆ ಆಹ್ವಾನ ನೀಡುವಂತಿದ್ದು. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹಳೆ ದೇವರಗುಡ್ಡ ರಸ್ತೆ (ಶಿವಾ ಕಾಲೇಜು ಹಿಂಭಾಗ), ದರ್ಗಾ ವೃತ್ತದಿಂದ ಕೋಟೆ ಸಂಪರ್ಕ ರಸ್ತೆ, ಹಳೆ ಮಾಗೋಡ ರಸ್ತೆ, ಸಿದ್ದೇಶ್ವರ ನಗರ, ಈಶ್ವರ ನಗರ, ವಿನಾಯಕ ನಗರ, ಮೃತ್ಯುಂಜಯ ನಗರ, ನೆಹರು ವರ್ತಕರ ಕಲ್ಯಾಣ ಮಂಟಪ ರಸ್ತೆ, ಗಂಗಾಪುರ ಕ್ರಾಸ್‌ನಿಂದ ಅಡವಿ ಆಂಜನೇಯ ಬಡಾವಣೆ ಸಂಪರ್ಕ ರಸ್ತೆ, ವಿದ್ಯಾನಗರ, ಕಂಠಿ ಬೀರೇಶ್ವರ ನಗರ ಸೇರಿದಂತೆ ಹಲವು ಬಡಾವಣೆಗಳ ರಸ್ತೆಗಳು ಹದಗೆಟ್ಟಿವೆ. ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.ಗುಂಡಿಗಳಿಂದಾಗಿ ಕಾರುಗಳ ಟೈರ್ ಹಾಗೂ ಇತರ ಬಿಡಿಭಾಗಗಳು ಹಾನಿಗೊಳಗಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುವ ಆತಂಕ ಎದುರಾಗಿದೆ. ಕೆಲವು ಕಡೆ ಗುಂಡಿಗಳಿಗೆ ಕಲ್ಲಿನ ಪುಡಿ ಹಾಕಲಾಗಿದೆಯಾದರೂ ಡಾಂಬರೀಕರಣ ಮಾಡದ ಕಾರಣ ವಾಹನಗಳು ಸಂಚರಿಸಿದಾಗ ಧೂಳು ವ್ಯಾಪಿಸುತ್ತಿದೆ. ಲಾರಿ ಹಾಗೂ ಬಸ್‌ಗಳು ಸಂಚರಿಸಿದಾಗ ಏಳುವ ಧೂಳಿನಿಂದ ರಸ್ತೆ ಬದಿಯ ನಿವಾಸಿಗಳು ಮತ್ತು ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಗರ ವ್ಯಾಪ್ತಿಯ ಹದಗೆಟ್ಟ ರಸ್ತೆಗಳನ್ನು ಪರಿಶೀಲಿಸಿ, ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಿ ಶಾಶ್ವತ ದುರಸ್ತಿ ಕೈಗೊಳ್ಳಬೇಕು. ಧೂಳಿನ ಸಮಸ್ಯೆಗೂ ಪರಿಹಾರ ಕಲ್ಪಿಸಿ ವಾಹನ ಸವಾರರು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ನಗರದಲ್ಲಿ ಈಗಾಗಲೇ ಹಲವು ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದರಂತೆ ಉಳಿದ ಹದಗೆಟ್ಟ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಿ, ಅಗತ್ಯವಿರುವ ಕಡೆ ಡಾಂಬರೀಕರಣ ಕಾಮಗಾರಿ ಮಾಡಲಾಗುವುದು ಎಂದು ರಾಣಿಬೆನ್ನೂರು ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಹೇಳಿದರು.