ಬಳ್ಳಾರಿ: ಇಂದು ನಾವು ಅನುಭವಿಸುತ್ತಿರುವ ಸುಂದರ ಪರಿಸರ, ನೆಲ, ಜಲ, ಭಾಷೆಯ ಶ್ರೀಮಂತಿಕೆಗೆ ಈ ಹಿಂದಿನ ಮಹಾತ್ಮರ ನಿಸ್ವಾರ್ಥ ಕೊಡುಗೆಯೇ ಕಾರಣ ಎಂದು ಮೇಯರ್ ಪಿ. ಗಾದೆಪ್ಪ ಹೇಳಿದರು.
ವಿದ್ಯಾರ್ಥಿಗಳಿಗೆ ಕೆಂಪೇಗೌಡ ಸೇರಿದಂತೆ ಅನೇಕ ಮಹನೀಯರ ತ್ಯಾಗ ಹಾಗೂ ಹೋರಾಟ ಕುರಿತು ಮನವರಿಕೆ ಮಾಡಿಕೊಡುವ ಕೆಲಸಗಳಾಗಬೇಕು. ಜನಪರ ನಾಡು ಕಟ್ಟಿದವರ ಸ್ಮರಣೆಯ ಜತೆಗೆ ಅಧ್ಯಯನ ಮಾಡುವ ಆಸ್ಥೆ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ವಿಜಯನಗರ ಸಾಮ್ರಾಜ್ಯದ ವೈಭವ, ಅಲ್ಲಿನ ಸಂಪತ್ತು, ಕಟ್ಟಡಗಳು ಹಾಗೂ ದೇವಸ್ಥಾನಗಳನ್ನು ಕಂಡು ಪ್ರೇರಿತರಾಗಿದ್ದ ಕೆಂಪೇಗೌಡರು, ತಾವೂ ಇಂತಹದೊಂದು ಸುಂದರ ನಾಡನ್ನು ಕಟ್ಟಬೇಕೆಂಬ ಕನಸು ಕಂಡಿದ್ದರು.ಈಗಿನ ಯುವಪೀಳಿಗೆ ಕೆಂಪೇಗೌಡರಂತೆಯೇ ನಾಡು ಕಟ್ಟಬೇಕೆಂದೇನಿಲ್ಲ. ಸಮಾಜದಲ್ಲಿ ಉತ್ತಮ ನಾಗರಿಕರಾದರೆ ಸಾಕು. ಅಧ್ಯಯನದ ಪರಿಶ್ರಮ ಮೂಲಕ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದು ನಿಸ್ವಾರ್ಥದಿಂದ ಸೇವೆ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಕಾಂಗ್ರೆಸ್ ಮುಖಂಡ ವಿಷ್ಣು ಬೋಯಪಾಟಿ, ಜೆ.ವಿ. ಮಂಜುನಾಥ ಇದ್ದರು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.