ಬ್ಯಾಡಗಿ: ದೇಶದ ಸಾರ್ವಭೌಮತ್ವದ ಮರುಸ್ಥಾಪನೆಗೆ ಲಕ್ಷಾಂತರ ದೇಶ ಭಕ್ತರು ತಮ್ಮ ನೆತ್ತರನ್ನು ಹರಿಸಿ ಪ್ರಾಣತ್ಯಾಗ ಮಾಡಿದ್ದಾರೆ. ಅಂಥವರನ್ನು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳದಿದ್ದರೆ ಭಾರತೀಯ ಪ್ರಜೆಯಾಗಿ ಬದುಕುವ ನೈತಿಕ ಹಕ್ಕು ಕಳೆದುಕೊಳ್ಳಲಿದ್ದೇವೆ ಎಂದು ಬಿಇಎಸ್ ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಏಕತೆ ಬಲವರ್ಧನೆ: ಉಪನ್ಯಾಸಕ ಡಾ. ಎನ್.ಎಸ್. ಪ್ರಶಾಂತ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಕುರಿತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜಾಗೃತಿ ನೀಡುವ ಮೂಲಕ ಯುವಕರಿಗೆ ಸ್ಫೂರ್ತಿ ನೀಡಿದಂತಾಗಲಿದೆ. ಇಂತಹ ಕಾರ್ಯಕ್ರಮಗಳಿಂದ ಯುವಕರಲ್ಲಿ ರಾಷ್ಟ್ರೀಯ ಏಕತೆ ಕೂಡ ಬಲವರ್ಧನೆಗೊಳ್ಳಲಿದೆ. ಅಲ್ಲದೇ ದೇಶದ ಯುವಕರಿಗೆ ತಮ್ಮ ಜವಾಬ್ದಾರಿ ನೆನಪಿಸುವ ದಿನ ಇದಾಗಿದ್ದು, ಶಹೀದ್ ದಿವಸ್ ಆಚರಣೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶ ಭಕ್ತರ ವಿರುದ್ಧ ನಡೆದ ಅನ್ಯಾಯದ ಕ್ರಮಗಳನ್ನು ಖಂಡಿಸುವುದು, ಅವರ ಆದರ್ಶಗಳನ್ನು ಕಾಪಾಡುವ ಹಾಗೂ ದೇಶಕ್ಕಾಗಿ ಸಮರ್ಪಣಾ ಮನೋಭಾವನೆ ಮೂಡಿಸಲು ಸಹಕಾರಿಯಾಗಲಿದೆ ಎಂದರು.
ದೇಶ ಭಕ್ತಿಯ ದ್ಯೋತಕ: ಉಪನ್ಯಾಸಕ ಡಾ. ಸುರೇಶಕುಮಾರ ಪಾಂಗಿ ಮಾತನಾಡಿ, ಹುತಾತ್ಮರನ್ನು ಗೌರವಿಸುವುದು ಸ್ಮಾರಕಗಳ ನಿರ್ಮಾಣ, ಸ್ವಾತಂತ್ರ್ಯ ವೀರರಿಗೆ ಗೌರವ ಸಲ್ಲಿಸುವುದು ದೇಶದೆಲ್ಲೆಡೆ ನಿರಂತರವಾಗಿ ನಡೆದು ಬರುತ್ತಿದೆ. ಇದರಿಂದ ಬರುವ ಪೀಳಿಗೆಗೆ ಕ್ರಾಂತಿಕಾರಿ ಹೋರಾಟಗಳು ಸ್ಫೂರ್ತಿಯ ಸೆಲೆಯಾಗಿ ನಿಲ್ಲಲಿವೆ, ದೇಶಭಕ್ತಿಯ ಮೌಲ್ಯಗಳನ್ನು ಎತ್ತಿಹಿಡಿಯಲು ಯುವಕರನ್ನು ಪ್ರೋತ್ಸಾಹಿಸಲಿದೆ. ಅವರ ಧೈರ್ಯ, ಸಾಹಸ, ಶೌರ್ಯ ಮತ್ತು ತ್ಯಾಗದ ಕುರಿತು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗುತ್ತದೆ. ಹೀಗಾಗಿ ಅವರನ್ನು ನೆನೆಯುವುದು ಸಹ ದೇಶಭಕ್ತಿಯ ದ್ಯೋತಕವಾಗಲಿದೆ ಎಂದರು.ಉಪನ್ಯಾಸಕರಾದ ಡಾ. ಪ್ರಭುಲಿಂಗ ದೊಡ್ಮನಿ, ಡಾ. ಎ.ಎಸ್. ರಷ್ಮಿ, ಪ್ರವೀಣ ಬಿದರಿ, ಪ್ರಶಾಂತ ಜಂಗಳೇರ, ಶಶಿಧರ ಮಾಗೋಡ, ಕಿರಣ ಡಂಬರಮತ್ತೂರ, ಶಿವನಗೌಡ ಪಾಟೀಲ, ಜ್ಯೋತಿ ಹಿರೆಮಠ, ನಿವೇದಿತ ವಾಲಿಶೆಟ್ಟರ, ಅಂಬಿಕಾ ನವಲೆ, ಸಂತೋಷ ಉದ್ಯೋಗಣ್ಣನವರ, ಎಂ.ಆರ್. ಕೋಡಿಹಳ್ಳಿ ಹಾಗೂ ಇನ್ನಿತರರಿದ್ದರು.