ಜಾತಿ ವ್ಯವಸ್ಥೆ ಬುಡ ಸಮೇತ ಕಿತ್ತೆಸೆಯುವುದು ಅಗತ್ಯ

KannadaprabhaNewsNetwork |  
Published : Aug 25, 2025, 01:00 AM IST
ಫೋಟೋ: 24 ಹೆಚ್‌ಎಸ್‌ಕೆ 1ಹೊಸಕೋಟೆ ನಗರದ ಹೊರವಲಯದ ಖಾಸಗಿ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದೇವಗಾಣಿಗರ - ಒಂಟೆತ್ತು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿದರು. | Kannada Prabha

ಸಾರಾಂಶ

ಜಾತಿ ವ್ಯವಸ್ಥೆ

ಹೊಸಕೋಟೆ: ಸಮಾಜದಲ್ಲಿ ಆಳವಾಗಿ ಬೇರೂರಿರು ಜಾತಿ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತುಹಾಕುವ ಕೆಲಸ ಯುವ ಸಮುದಾಯದಿಂದ ಆಗಬೇಕು ಎಂದು ಶಾಸಕ ಶರತ್ ಬಚ್ಚೆಗೌಡ ತಿಳಿಸಿದರು.

ನಗರದಲ್ಲಿ ಕರ್ನಾಟಕ ರಾಜ್ಯ ದೇವಗಾಣಿಗರ-ಒಂಟೆತ್ತು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯನ್ನು ದೂರವಿಟ್ಟು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮುದಾಯಗಳನ್ನು ಗುರುತಿಸಬೇಕಿದೆ. ಆದರೆ ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು ಜಾತಿ ವ್ಯವಸ್ಥೆ ಹೋಗಲಾಡಿಸುವ ದೊಡ್ಡ ಕೆಲಸ ನಮ್ಮಿಂದಲೇ ಆಗಬೇಕು. ಪ್ರಮುಖವಾಗಿ ನಮ್ಮ ದೇಶದಲ್ಲಿ ನಮ್ಮದೇ ಆದ ಕುಲ ಕಸುಬಿನ ಮೂಲಕ ನಾವೆಲ್ಲಾ ಗುರುತಿಸಿಕೊಂಡಿದ್ದೇವೆ. ಕುಲಕಸುಬನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಬೆಳೆಸಿ ಸಮಾಜದ ಸತ್ಪ್ರಜೆಗಳಾಗಿ ಬೆಳೆಸಬೇಕು. ದೇವಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳಕ್ಕೆ ಮನವಿ ಸಲ್ಲಿಸಿದ್ದು ತ್ವರಿತವಾಗಿ ಜಾಗ ಗುರುತಿಸಿ ಸ್ಥಳಾವಕಾಶ ಕಲ್ಪಿಸಿಕೊಡುತ್ತೇನೆ. ಆದರೆ ತಾಲೂಕಿನಲ್ಲಿರುವ ಗಾಣಿಗ ಸಮುದಾಯದ ಇತರೆ ಉಪ ಜಾತಿಗಳ ಕಾರ್ಯಕ್ರಮಗಳಿಗೂ ಸ್ಥಳಾವಕಾಶ ಮಾಡಿಕೊಡುವ ಉದಾರ ಮನಸ್ಸು ನಿಮ್ಮದಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆ ಎನ್ನುವುದು ದೊಡ್ಡ ಶಾಪವಾಗಿದೆ. ಜಾತಿ ವ್ಯವಸ್ಥೆ ಹೋಗಲಾಡಿಸಲು ನಮ್ಮ ಮನಸ್ಸುಗಳನ್ನು ಬದಲಾಯಿಸಬೇಕು. ಸೌಲಭ್ಯ ವಂಚಿತರನ್ನು ಗುರುತಿಸಿ ಸೌಲಭ್ಯ ಒದಗಿಸಲು ಜಾತಿ ಗಣತಿ ಮಾಡಬೇಕೇ ವಿನಃ ಜಾತಿ ಜನಾಂಗದ ಲೆಕ್ಕಾಚಾರಕ್ಕೆ ಮಾಡಬಾರದು. ಕೇಂದ್ರ ಸರ್ಕಾರ ಸಾಮಾಜಿಕ ಶೈಕ್ಷಣಿಕ ಗಣತಿ ಮಾಡಬೇಕು. ಈ ನಿಟ್ಟಿನಲ್ಲಿ ದೇಶದ ಪ್ರಧಾನ ಮಂತ್ರಿಗಳು, ಗೃಹ ಸಚಿವರು ಮುಂದಾಗಬೇಕು. ಜಾತಿಗಣತಿಗೆ ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲದಿದ್ದರೂ ಕೂಡ ಸಿದ್ದರಾಮಯ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದೆ. ಅಭಿವೃದ್ಧಿ ನಿಗಮಗಳು ಎಲ್ಲಾ ಸಮುದಾಯಗಳಿಗೂ ಸ್ಥಾಪನೆ ಆಗಬೇಕು. ಆದ್ದರಿಂದ ಶಾಸಕರು ಸರ್ಕಾರದ ಗಮನಕ್ಕೆ ತಂದು ಗಾಣಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮಾಡಬೇಕು ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾತನಾಡಿ, ಸಮ ಸಮಾಜ ನಿರ್ಮಾಣ ಎಲ್ಲರ ಆಶಯ ಆಗಬೇಕು. ಗಾಣಿಗ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಹೋದರೆ ರಾಜ್ಯದಲ್ಲಿ ಪ್ರತಿ ಜಾತಿಗೆ ಒಂದರಂತೆ ೮೦೦ ನಿಗಮ ಮಂಡಳಿ ಮಾಡಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಾತಿ ಗಣತಿ ಬಿಟ್ಟು ಶೈಕ್ಷಣಿಕವಾಗಿ ಜಾತಿ ಸಮೀಕ್ಷೆ ಮಾಡಿ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸರ್ಕಾರಗಳು ಮುಂದಾಗಬೇಕು ಎಂದರು.

ಸಮಾವೇಶದಲ್ಲಿ ಆಂದ್ರ ಪ್ರದೇಶದ ಮಾಜಿ ಶಾಸಕ ಗೌನಿವಾರಿ ಶ್ರೀನಿವಾಸಲು, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಗಾಣಿಗ ಸಮುದಾಯದ ಮುಖಂಡ ವೇಣುಗೋಪಾಲ್, ರಾಜ ದೇವಗಾಣಿಗರ ಒಂಟೆತ್ತು ಗಾಣಿಗರ ಸಂಘದ ಅಧ್ಯಕ್ಷ ಕೆ.ವಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಬಿ ಸದಾಶಿವಪ್ಪ, ಖಜಾಂಚಿ ಕೆಎಂ.ನಾರಾಯಣಪ್ಪ, ತಾಲೂಕು ಅಧ್ಯಕ್ಷ ರಮೇಶ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಕೋಟ್.......................

ಮನುಷ್ಯ ಹಣ ಆಸ್ತಿ ಸಂಪಾದನೆ ಮಾಡಿದರೆ ಅದು ಇನ್ನೊಬ್ಬರ ಪಾಲಾಗುತ್ತೆ. ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅದು ದೇಶದ ಉನ್ನತಿಗೆ ಸಾಕಾರವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಶಿಕ್ಷಣ ದುಬಾರಿಯಾಗಿದೆ. ಆದ್ದರಿಂದ ತಾಲೂಕಿನಲ್ಲಿ ೩೦ ಕೋಟಿ ಅನುದಾನದಲ್ಲಿ ೩೦ ಮಾದರಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಬಡ ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದೇವೆ- ಶರತ್ ಬಚ್ಚೇಗೌಡ, ಶಾಸಕ

ಫೋಟೋ: 24 ಹೆಚ್‌ಎಸ್‌ಕೆ 1

ಹೊಸಕೋಟೆ ನಗರದ ಹೊರವಲಯದ ಖಾಸಗಿ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದೇವಗಾಣಿಗರ - ಒಂಟೆತ್ತು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ