ಸಾಹಿತ್ಯವನ್ನು ಹೊಲಸು ಮಾಡುವವರನ್ನು ಜನರು ಒಪ್ಪಿಕೊಳ್ಳುವುದಿಲ್ಲ । ಸರ್ಸೆ ಸೆರ್ಸೆ ಸೆರಗ ಸರ್ಸೆ ಹಾಡಿನ ಕುರಿತು ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಟೀಕೆ
ಕವಿ ಮನಸ್ಸಿನ ಸಾಹಿತಿ ಹಾಡನ್ನು ಬರೆಯುವದಕ್ಕೂ ಕವಿ ಲೋಕದಿಂದ ಹೊರಗೆ ನಿಂತು ವ್ಯಾಪಾರಿ ಸೂತ್ರದಡಿ ಜನರನ್ನು ಬೇಗ ಆಕರ್ಷಿಸಬೇಕೆಂಬ ಧಾವಂತದಲ್ಲಿ ಬರೆದ ಹಾಡು ಯಾವ ರೀತಿ ಸಮಾಜದಲ್ಲಿ ಗಲಾಟೆ, ಗದ್ದಲಗಳಿಗೆ ಕಾರಣವಾಗುತ್ತವೆ ಎನ್ನುವುದಕ್ಕೆ ಸರ್ಸೆ ಸರ್ಸೆ ಸೆರಗ ಸರ್ಸೆ ಹಾಡು ಸಾಕ್ಷಿಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಕೆಟಿಎಚ್ ಕನ್ನಡ ಬಳಗ ವಿಶ್ವ ಕವಿಗಳ ದಿನದ ಅಂಗವಾಗಿ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಒಂದು ಸಾಹಿತ್ಯ, ಒಂದು ಹಾಡು, ಒಂದು ಸಿನಿಮಾ ಸಮಾಜಕ್ಕೆ ಯಾವ ಸಂದೇಶವನ್ನು ಕೊಡಬೇಕು ಎನ್ನುವುದು ಬಹಳ ಮುಖ್ಯ. ಅಶ್ಲೀಲತೆಯೇ ಸಾಹಿತ್ಯವಲ್ಲ. ಅಶ್ಲೀಲತೆಯನ್ನು ಸಾಹಿತ್ಯದ ಮೂಲಕ ಹೊರಹೊಮ್ಮಿಸುವವನು ಕವಿಯೂ ಆಗಲಾರ, ಸಾಹಿತಿಯೂ ಆಗಲಾರ. ಯಾರು ತನ್ನ ನೆಲ, ಜಲ, ಹೆಣ್ಣು, ಸಂಸ್ಕೃತಿಯನ್ನು ಅವಹೇಳನ ಮಾಡುತ್ತಾನೋ ಅವನು ಒಟ್ಟಾರೆ ಜನರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾನೆ. ಜನರೇನು ದಡ್ಡರಲ್ಲ. ಮನರಂಜನೆ ಬೇಕು ನಿಜ. ಆದರೆ, ಮನರಂಜನೆ ಹೆಸರಿನಲ್ಲಿ ಏನೇನೋ ಕೊಟ್ಟರೆ ಅವರು ಒಪ್ಪಿಕೊಳ್ಳುವುದಿಲ್ಲ. ಕವಿತೆಗಳು ಸಮಾಜದ ಜನರ ಅಭಿರುಚಿಯನ್ನು ಹೆಚ್ಚಿಸಬೇಕು. ಭಾಷೆಯನ್ನು ಪ್ರೀತಿಸುವ, ಹೆಣ್ಣನ್ನು ಗೌರವಿಸುವ, ಪ್ರಕೃತಿಯನ್ನು ಆರಾಧಿಸುವ, ಜನರ ಬದುಕನ್ನು ಕಟ್ಟಿಕೊಡುವ ಕವಿತೆಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ನುಡಿದರು.
ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಈಗಿನ ಕವಿಗಳು ಹೇಗೆ ಚಿಂತನೆ ಮಾಡುತ್ತಾರೆ, ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ, ಅವರ ಆಲೋಚನೆಗಳೇನು, ಅವರ ಕವಿತೆಗಳು ಹೇಗಿರುತ್ತವೆ ಎನ್ನುವ ಕುತೂಹಲವಿರುತ್ತದೆ. ಅದನ್ನು ಗಮನಿಸುವ ಸಲುವಾಗಿಯೇ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.
ನನ್ನೂರು ನನ್ನೊಳಗೆ ಸೇರಿಹೋಗಿದೆ. ಅನುಭವಗಳು ನನ್ನ ಹಾಡುಗಳಿಗೆ ಪ್ರೇರಣೆ ನೀಡಿವೆ. ನನ್ನ ಹಾಡುಗಳಲ್ಲಿ ನನ್ನೂರಿನ ಪರಿಕಲ್ಪನೆಗಳು, ಚಿತ್ರಣಗಳಿವೆ. ಮಂಡ್ಯ ಜಿಲ್ಲೆಯ ಜನಪದ ಸಾಹಿತ್ಯ, ಇಲ್ಲಿನ ಜನರ ಬದುಕು ನನ್ನ ಹಾಡುಗಳಲ್ಲಿ ಸೇರಿಹೋಗಿದೆ ಎಂದ ನಾಗೇಂದ್ರ ಪ್ರಸಾದ್, ಎರಡು ದಿನದಲ್ಲಿ ನಾಗಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಲೂಕು ಅಧ್ಯಕ್ಷನಾಗುವ ಸೌಭಾಗ್ಯ ಒಲಿದುಬಂದಿದ್ದು ನನ್ನ ಪುಣ್ಯ ಎಂದು ಹೇಳಿದರು.