- ಹೈಕಮಾಂಡ್ ಆದೇಶ ಪಾಲಿಸಲೇಬೇಕು, ರಾಜಣ್ಣ ಮತ್ತೆ ಸಂಪುಟಕ್ಕೆ ಬಂದರೆ ಸ್ವಾಗತ: ಬಸವರಾಜ ಶಿವಗಂಗಾ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಮಾಡಿದ್ದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಷಡ್ಯಂತ್ರವೆಂದು ಹೇಗೆ ಹೇಳುತ್ತೀರಾ? ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಎಂಬಂತೆ ಆಯ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತ ಬಳಗದ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಮುಂದೆ ಯಾರೂ ದೊಡ್ಡವರಲ್ಲ. ನಾಳೆ ನನಗೆ ಹೈಕಮಾಂಡ್ ಏನೇ ಹೇಳಿದರೂ ನಾನು ತಲೆಬಾಗಬೇಕು. ರಾಜಣ್ಣ ವಜಾ ಹಿಂದೆ ಮಹಾನಾಯಕನ ಷಡ್ಯಂತ್ರವಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಏನೇ ಆದರೂ ಎಲ್ಲದಕ್ಕೂ ಮಹಾ ನಾಯಕರೇ ಕಾಣುತ್ತಾರೆ. ಯಾರ ತಪ್ಪಿನಿಂದ ಶಿಕ್ಷೆ ಆಗಿದೆ ಎಂಬುದನ್ನು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.ವರಿಷ್ಠರು ತೀರ್ಪು ಕೈಗೊಳ್ಳಬೇಕು:
ರಾಹುಲ್ ಗಾಂಧಿ ನಮ್ಮ ಪಕ್ಷದ ಪ್ರಶ್ನಾತೀತ ರಾಷ್ಟ್ರೀಯ ನಾಯಕರು. ರಾಹುಲ್ ಅವರ ನಾಯಕತ್ವದ ಕೆಳಗೆ ನಾವೆಲ್ಲರೂ ಶಾಸಕರಾಗಿದ್ದೇವೆ. ರಾಹುಲ್ ಗಾಂಧಿಯವರನ್ನೇ ನಾವು ಪ್ರಶ್ನೆ ಮಾಡಿದರೆ ಏನರ್ಥ? ಪ್ರಶ್ನೆ ಮಾಡುವುದಿದ್ದರೆ ನೇರವಾಗಿ ಕುಳಿತುಕೊಂಡು ಮಾತನಾಡಲಿ. ಮಾಧ್ಯಮಗಳ ಮುಂದೆ ಮಾತನಾಡಿ ಪಕ್ಷವನ್ನು ಹಗುರವಾಗಿ ತೆಗೆದುಕೊಂಡು ಹೋದರೆ ಏನು ಹೇಳಬೇಕು? ಕಾಂಗ್ರೆಸ್ ವರಿಷ್ಠರು ಇಂತಹ ತೀರ್ಪು ಕೈಗೊಳ್ಳಬೇಕು. ಯಾರೇ ಇದ್ದರೂ ಇಂತಹ ನಿಲುವು, ನಿರ್ಧಾರ ಕೈಗೊಂಡಾಗ ಪಕ್ಷವು ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಡಿಕೆಶಿ ಪರ ಬ್ಯಾಟಿಂಗ್:
ಮಹಾ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಮಹಾ ನಾಯಕ ಅಂತೆಲ್ಲಾ ಏನು ಊಹಿಸಿಕೊಂಡಿದ್ದಾರೋ, ಅಂತಹವರ ಬಗ್ಗೆ ಮಾತನಾಡುವುದಕ್ಕಾದರೂ ನೈತಿಕತೆ ಬೇಕಲ್ಲವೇ? ಪಾಪ ನಮ್ಮ ನಾಯಕರು ಈವರೆಗೂ ಯಾರ ಬಗ್ಗೆಯೂ ಮಾತನಾಡಿಲ್ಲ. ತಾವಾಯ್ತು, ತಮ್ಮ ಕೆಲಸವಾಯ್ತು ಇದ್ದಾರೆ. ಪಕ್ಷದು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸಿದ್ದು, ಉಪ ಮುಖ್ಯಮಂತ್ರಿ ಹುದ್ದೆಯನ್ನೂ ನೀಡಿದೆ. ಈ ಎರಡೂ ಜವಾಬ್ದಾರಿ ನಿರ್ವಹಿಸುತ್ತಿದ್ದುದನ್ನು ಬಿಟ್ಟರೆ ಯಾರ ಬಗ್ಗೆಯೂ ಚಿಂತೆ ಮಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಪರ ಶಿವಗಂಗಾ ಬ್ಯಾಟ್ ಬೀಸಿದರು.ರಾಜಣ್ಣನವರಿಗೇ ಹೇಳಿ:
ಬಹಳಷ್ಟು ಜನರಿಗೆ ಡಿ.ಕೆ.ಶಿವಕುಮಾರ್ ಬಗ್ಗೆಯೇ ಚಿಂತೆಯಾಗಿ ಬಿಟ್ಟಿದೆ. ನಾಗೇಂದ್ರ, ಕೆ.ಎನ್.ರಾಜಣ್ಣ ನಂತರ ಸತೀಶ ಜಾರಕಿಹೊಳಿ ಎಂಬ ಆರೋಪ ಮಾಡುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಮಾತನ್ನು ಹಿಂದೆಯೇ ಕೆ.ಎನ್.ರಾಜಣ್ಣ ಹೇಳಿದ್ದನ್ನು ಕೇಳಿದ್ದೀನಿ. ಯಾರು ತಪ್ಪು ಮಾಡಿದ್ದಾರೋ ಅಂತಹವರಿಗೆ ಶಿಕ್ಷೆಯಾಗುತ್ತದೆ. ಸಂಪುಟದಿಂದ ವಜಾ ಮಾಡಿದ್ದು ಯಾಕೆಂಬ ಬಗ್ಗೆ ಪ್ರಶ್ನಿಸಲು ರಾಜಣ್ಣನವರಿಗೆ ಹೇಳಿ ಎಂದು ತಿಳಿಸಿದರು.ರಾಜಣ್ಣಗೂ ತಪ್ಪಿನ ಅರಿವಾಗಿದೆ:
ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ರಾಜಣ್ಣನವರಿಗೂ ತಪ್ಪಿನ ಅರಿವಾಗಿದೆ. ಹೈಕಮಾಂಡ್ ಜೊತೆಗೆ ಮಾತನಾಡುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಮನವೊಲಿಸಿ, ಮತ್ತೆ ಕೆ.ಎನ್.ರಾಜಣ್ಣ ಸಚಿವರಾದರೆ ಸ್ವಾಗತ ಮಾಡುತ್ತೇವೆ ಎಂದರು.- - -
(ಬಾಕ್ಸ್)* ರಾಜಣ್ಣ ಬಿಜೆಪಿಗೆ ಹೋಗಲ್ಲ, ಶ್ರೀರಾಮುಲು ಕಾಂಗ್ರೆಸ್‌ಗೆ ಬರಲಿ ದಾವಣಗೆರೆ: ಮುಳುಗುತ್ತಿರುವ ದೋಣಿಯಾದ ಬಿಜೆಪಿಗೇನೂ ಕೆ.ಎನ್.ರಾಜಣ್ಣ ಹೋಗುವುದಿಲ್ಲ. ನೇರ, ನಿಷ್ಟುರವಾಗಿ ಮಾತನಾಡುವ ಅವರು ನಮ್ಮ ಪಕ್ಷದಲ್ಲೇ ಇರುತ್ತಾರೆ ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಹೇಳಿದರು.
ರಾಜಣ್ಣಗೆ ಬಿಜೆಪಿಗೆ ಆಹ್ವಾನವಿದೆಯಂತಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಈಗ ಅನಿವಾರ್ಯವಾಗಿದ್ದು, ಯಾರೂ ಆ ಪಕ್ಷದಲ್ಲಿಲ್ಲ. ಯಾರು ಸಿಗುತ್ತಾರೋ ಅಂತಹವರನ್ನು ಬೇಕು ಎನ್ನುತ್ತಿದ್ದಾರೆ. ಬಿಜೆಪಿಗೆ ರಾಜಣ್ಣಗೆ ಕರೆ ತರುವ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಮಾತನ್ನಾಡಿದ್ದನ್ನು ಗಮನಿಸಿದ್ದೇನೆ. ಬೇಕಿದ್ದರೆ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬರಲಿ. ವಾಲ್ಮೀಕಿ ಸಮುದಾಯದ ರಾಜ್ಯ, ರಾಷ್ಟ್ರೀಯ ನಾಯಕ ಶ್ರೀರಾಮುಲು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಹೇಳಿದರು.- - -
-17ಕೆಡಿವಿಜಿ.ಜೆಪಿಜಿ: ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.