ಕನ್ನಡಪ್ರಭ ವಾರ್ತೆ ಕಾರವಾರ
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಮಾತನಾಡಿ, ಕಳೆದ 40 ವರ್ಷಗಳಿಂದ ಭಟ್ಕಳ ಬಸ್ ನಿಲ್ದಾಣದ ಸಮೀಪದಲ್ಲೇ ಟ್ಯಾಕ್ಸಿ ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ. ಆದರೆ, ಈಗ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಅಧಿಕಾರಿಗಳು ಏಕಾಏಕಿ ನಮಗೆ ಜಾಗ ಖಾಲಿ ಮಾಡುವಂತೆ ಸೂಚಿಸುತ್ತಿದ್ದಾರೆ. ನಮಗೆ ಪರ್ಯಾಯವಾಗಿ ಸೂಕ್ತ ಸ್ಥಳವನ್ನು ಗುರುತಿಸಿಕೊಡದೆ ನಾವು ಇಲ್ಲಿಂದ ಕದಲುವುದಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಶಿರಾಲಿ ಮಾತನಾಡಿ, ಭಟ್ಕಳದಲ್ಲಿ ಕೆಲವು ಆಟೋ ಚಾಲಕರು ನಿಯಮ ಮೀರಿ ಕುಂದಾಪುರ, ಸಿಗಂದೂರು ಮುಂತಾದ ದೂರದ ಊರುಗಳಿಗೆ ಬಾಡಿಗೆ ಹೋಗುತ್ತಿದ್ದಾರೆ. ಇನ್ನು ಖಾಸಗಿ ವಾಹನಗಳು ಧರ್ಮಸ್ಥಳ, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಪ್ರವಾಸಿಗರನ್ನು ಸಾಗಿಸುತ್ತಿವೆ. ಪರವಾನಗಿ ಇಲ್ಲದ ಖಾಸಗಿ ಬಸ್‌ಗಳು ಉಡುಪಿ-ಮಂಗಳೂರು ವರೆಗೆ ಸಂಚರಿಸುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಇದರಿಂದಾಗಿ ಅಧಿಕೃತ ಟ್ಯಾಕ್ಸಿ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಮಹಮದ್ ಮುಶ್ತಾಕ್ ಮಾತನಾಡಿ, ಭಟ್ಕಳದಲ್ಲಿ 250ಕ್ಕೂ ಹೆಚ್ಚು ಅಧಿಕೃತ ಟ್ಯಾಕ್ಸಿಗಳಿದ್ದರೂ, 200ಕ್ಕೂ ಹೆಚ್ಚು ಅಕ್ರಮ ಖಾಸಗಿ ವಾಹನಗಳು ಓಡಾಡುತ್ತಿರುವುದು ದುರದೃಷ್ಟಕರ ಎಂದರು.ಈ ಸಂದರ್ಭ ಟ್ಯಾಕ್ಸಿ ಚಾಲಕರಾದ ಫೈಜಲ್, ರಮೇಶ ಮಹಾದೇವ ನಾಯ್ಕ, ಮಹಮದ್ ಅದ್ನಾನ, ಶ್ರೀನಿವಾಸ ಮಂಜಯ್ಯ ನಾಯ್ಕ, ಗಜಾನನ, ರಾಘು ಶೇಟ್, ಮಹಮ್ಮದ್ ಸಲೀಮ್, ರಮೇಶ ಮಂಜಪ್ಪ ನಾಯ್ಕ, ಅಬ್ದುಲ್, ಸಲ್ಮಾನ್ ಸೇರಿದಂತೆ ಅನೇಕರಿದ್ದರು.