ಗದಗದಲ್ಲಿ ಜೀವನ ಜ್ಯೋತಿ ಆಶ್ರಯಧಾಮ ಲೋಕಾರ್ಪಣೆ
ಮನೆಯಲ್ಲಿ ಸಾಕು ನಾಯಿಗಳಿಗೆ ಲಕ್ಷಾಂತರ ವ್ಯಯಿಸುತ್ತಾರೆ, ಆದರೆ ಹೆತ್ತ ತಂದೆ-ತಾಯಿಯರನ್ನೇ ಕಡೆಗಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಮುತ್ತಣ್ಣ ಅನವಾಲದ ಹೇಳಿದರು.
ಗದಗ ಬೆಟಗೇರಿ ಹುಯಿಲಗೋಳ ರಸ್ತೆಯ ಬಾಲಾಜಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಶ್ರೀವಿದ್ಯಾ ವಿವಿಧೋದ್ದೇಶಗಳ ಮಹಿಳಾ ಸಂಸ್ಥೆ ಹಾಗೂ ಮುಂಡರಗಿಯ ಹೆಲ್ಪಿಂಗ್ ಹ್ಯಾಂಡ್ಸ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆರಂಭಿಸಲಾದ ಜೀವನ ಜ್ಯೋತಿ ಆಶ್ರಯಧಾಮ ಉದ್ಘಾಟಿಸಿ ಅವರು ಮಾತನಾಡಿದರು. ವೃದ್ಧರು, ಅಬಲೆಯರು ಹಾಗೂ ಅನಾಥರಿಗೆ ಆಸರೆಯಾಗಲು ಮಹಿಳೆಯರಿಬ್ಬರು ಆಶ್ರಮ ಸ್ಥಾಪಿಸಿರುವುದು ಪುಣ್ಯದ ಹಾಗೂ ಮಾದರಿ ಕಾರ್ಯ ಎಂದು ಹೇಳಿದರು.ಕೆಡಿಪಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಮಕಾನದಾರ ಮಾತನಾಡಿ, ಅನುದಾನ ಹಾಗೂ ಧನಸಹಾಯದ ನೆರವು ನೀಡುವುದಾಗಿ ಭರವಸೆ ನೀಡಿದರು. ಕಲ್ಯಾಣಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ಗೌಡರ ಗುರುಗಳು ಮಾತನಾಡಿ, ಇಬ್ಬರು ಸೋದರಿಯರ ಧೈರ್ಯ, ಛಲ ಶ್ಲಾಘಿಸಿ, ಬೆಂಬಲ ಘೋಷಿಸಿದರು. ಶಿರಹಟ್ಟಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾಬುಸಾಬ್ ಲಕ್ಷ್ಮೇಶ್ವರ ಹಾಗೂ ಬೆಂಗಳೂರಿನ ಅಖಿಲ ಕರ್ನಾಟಕ ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ದೇವು ಹಡಪದ ಮಾತನಾಡಿ, ಆಶ್ರಮಕ್ಕೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.