ಕೊಟ್ಟೂರು: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶ್ರೀಶೈಲ ಪೀಠದ ಡಾ. ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಬಹುವರ್ಷಗಳ ಭಕ್ತರ ಬೇಡಿಕೆಯಂತೆ ಇದೀಗ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವುದು ಉತ್ತಮ ಬೆಳವಣಿಗೆ. ಯಾವುದೇ ಉತ್ತಮ ಕಾರ್ಯಕ್ಕೆ ಸರ್ವರ ಬೆಂಬಲ ಬೇಕು. ಅಲ್ಲದೇ ರಾಮಮಂದಿರ ಅಪೂರ್ಣವಾಗಿದೆ, ಇಂತಹ ಮಂದಿರವನ್ನು ಈಗಲೇ ಉದ್ಘಾಟಿಸುವುದು ಸರಿಯಲ್ಲ ಎಂಬ ಆಕ್ಷೇಪಕ್ಕೆ ಉತ್ತರಿಸಿದ ಅವರು, ಎಲ್ಲ ಬಗೆಯ ಧಾರ್ಮಿಕ ಮುಖಂಡರು, ಹತ್ತಾರು ಪಂಚಾಂಗಗಳು, ಧಾರ್ಮಿಕ ಶಿಷ್ಟಾಚಾರಗಳನ್ನು ಗಮನಿಸಿ ಮಂದಿರ ಉದ್ಘಾಟನೆಗೆ ಸಮಯ ನಿಗದಿಗೊಳಿಸಿದ್ದಾರೆ. ಇದರಲ್ಲಿ ಯಾವುದೇ ಬಗೆಯ ಲೋಪ ಇಲ್ಲ ಎಂದರು.
ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಪಂಚಪೀಠಗಳ ಪರವಾಗಿ ಕಾಶಿಯ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಇತರ ಶಿವಾಚಾರ್ಯಗಳೊಂದಿಗೆ ತೆರಳಿದ್ದಾರೆ. ಅಲ್ಲದೇ ತಮ್ಮ ಪೂರ್ವನಿಯೋಜಿತ ಕಾರ್ಯಕ್ರಮಗಳ ಅನ್ವಯ ಅಯೋಧ್ಯೆಗೆ ನಮಗೆ ಹೋಗಲಾಗುತ್ತಿಲ್ಲ ಎಂದರು.ರಾಜ್ಯ ಸರ್ಕಾರವು ಕ್ರಾಂತಿಯೋಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸ್ವಾಗತಾರ್ಹ. ಇದಕ್ಕೊಂದು ಅಭಿವೃದ್ಧಿ ಕಾರ್ಯಗಳ ಯೋಜನೆ ರೂಪಿಸಿ ಜಾರಿಗೆ ತಂದರೆ ಮತ್ತಷ್ಟು ಮಹತ್ವ ಪಡೆಯುತ್ತದೆ ಎಂದರು.