ಗುರುಬಲದಿಂದಲೇ ವ್ಯಕ್ತಿಯ ಜೀವನ ಉನ್ನತ ಸ್ಥಾನಮಾನಕ್ಕೆ ತಲುಪಲು ಸಾಧ್ಯ-ಸ್ವಾಮೀಜಿ

KannadaprabhaNewsNetwork |  
Published : Aug 01, 2026, 02:15 AM IST
ಹಾವೇರಿಯ ಹೊಸಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಬಸವ ಶಾಂತಲಿಂಗ ಸ್ವಾಮೀಜಿ ಅವರಿಗೆ ಭಕ್ತರು ಗುರುವಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ಗುರುಗಳ ಮಾರ್ಗದರ್ಶನ, ಆಶೀರ್ವಾದ ಹಾಗೂ ಗುರುಬಲದಿಂದಲೇ ವ್ಯಕ್ತಿಯ ಜೀವನ ಉನ್ನತ ಸ್ಥಾನಮಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಗುರುಗಳ ಮಾರ್ಗದರ್ಶನ, ಆಶೀರ್ವಾದ ಹಾಗೂ ಗುರುಬಲದಿಂದಲೇ ವ್ಯಕ್ತಿಯ ಜೀವನ ಉನ್ನತ ಸ್ಥಾನಮಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಹೊಸಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸದ್ಭಕ್ತರಿಂದ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದ್ದು, ಗುರು-ಶಿಷ್ಯ ಪರಂಪರೆ ನಮ್ಮ ದೇಶದ ಹೆಮ್ಮೆಯ ಪರಂಪರೆಯಾಗಿದೆ ಎಂದು ಹೇಳಿದರು.

ರಾಮಾಯಣ, ಮಹಾಭಾರತ ಸೇರಿದಂತೆ ಪೌರಾಣಿಕ ಇತಿಹಾಸವನ್ನು ಅವಲೋಕಿಸಿದರೆ, ರಾಜರು ಮತ್ತು ಮಹಾರಾಜರು ಯಾವುದೇ ಶುಭ ಕಾರ್ಯ ಆರಂಭಿಸುವ ಮುನ್ನ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದು ಮುನ್ನಡೆಯುತ್ತಿದ್ದರು. ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಹಾಗೂ ಭಯದಿಂದ ನಿರ್ಭಯದ ಕಡೆಗೆ ಕೊಂಡೊಯ್ಯುವ ಶಕ್ತಿ ಗುರುಗಳಿಗೆ ಮಾತ್ರ ಇದೆ ಎಂದು ಅವರು ತಿಳಿಸಿದರು.

ಭಕ್ತಿ, ಶ್ರದ್ಧೆ ಮತ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುಗಳ ತತ್ವಗಳನ್ನು ಪಾಲಿಸಿದರೆ ಯಶಸ್ಸು ಸಾಧಿಸಲು ಸಾಧ್ಯ. ಗುರು ಪೂರ್ಣಿಮೆಯನ್ನು ವ್ಯಾಸ ಮಹರ್ಷಿಗಳ ಜನ್ಮದಿನವಾಗಿಯೂ ಆಚರಿಸಲಾಗುತ್ತದೆ. ಗುರುಗಳ ಸ್ಮರಣೆ ಮತ್ತು ಗೌರವದ ಸಂಕೇತವಾಗಿರುವ ಈ ಹಬ್ಬವು ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ ಎಂದರು.

"ಹರ ಮುನಿದರು ಗುರು ಕಾಯಿವನು " ಎಂಬ ನುಡಿಯಂತೆ ಗುರುಗಳ ಮಾರ್ಗದರ್ಶನ ಬದುಕಿಗೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಗುರುಗಳ ಆಶೀರ್ವಾದ ಪಡೆದು ಸತ್ಪಥದಲ್ಲಿ ಸಾಗಬೇಕು. ಎಲ್ಲರ ಬದುಕಿನಲ್ಲೂ ಹೊಸ ಚೈತನ್ಯ ಮೂಡಿ, ಗುರುಗಳ ಕೃಪೆ ಸದಾ ಇರಲಿ ಎಂದು ಶ್ರೀಗಳು ಹಾರೈಸಿದರು.

ಶ್ರೀಮಠದ ಭಕ್ತ ರುದ್ರೇಶ ಚಿನ್ನಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಬಲ ಎಲ್ಲ ಬಲಕ್ಕಿಂತ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲೂ ಗುರುಗಳ ಪ್ರಭಾವ ಮಹತ್ವದ್ದಾಗಿದೆ. ಗುರುಗಳ ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡರೆ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.

ನಿವೃತ್ತ ಅಧಿಕಾರಿ ಮಹಾದೇವಪ್ಪ ಕುಮ್ಮೂರ ಮಾತನಾಡಿ, ಗುರುಪರಂಪರೆಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಶ್ರೀ ಬಸವಶಾಂತಲಿಂಗ ಸ್ವಾಮೀಜಿಗಳು ಧಾರ್ಮಿಕ ಹಾಗೂ ಜನೋಪಯೋಗಿ ಕಾರ್ಯಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದು, ಭಕ್ತರು ಅವರನ್ನು ಗೌರವಿಸಿ ಸನ್ಮಾನಿಸಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶ್ರೀ ಬಸವಶಾಂತಲಿಂಗ ಸ್ವಾಮೀಜಿಗಳಿಗೆ ಭಕ್ತರು ಪುಷ್ಪಾರ್ಚನೆ ಸಲ್ಲಿಸಿ, ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವ ಸನ್ಮಾನ ಮಾಡಿದರು.

ಕಾರ್ಯಕ್ರಮದಲ್ಲಿ ಪರಶುರಾಮ ಹರ್ಲಾಪುರ, ಜಯದೇವ ಕೆರೂಡಿ, ಉಡಚಪ್ಪ ಮಾಳಗಿ, ಸೋಮಣ್ಣ ಸವೂರ, ಎ.ಎಚ್. ಕಬ್ಬಿಣಕಂತಿಮಠ, ನಿಂಗಪ್ಪ ಆರೇರ, ಹೊನ್ನಪ್ಪ ಅಗಸಿಬಾಗಿಲ, ಅಮೀರಜಾನ್ ಬೇಪಾರಿ, ಶಾಹಿದ್ ದೇವಿಹೊಸೂರ, ಮಂಜಣ್ಣ ಗಾಜೀಗೌಡ್ರ, ಹೇಮಾವತಿ ಹರ್ಲಾಪುರ, ನವೀದ್ ಅಮ್ಮಿನಭಾವಿ, ಮಾಲತೇಶ ಆನವಟ್ಟಿ, ಗಣೇಶ ಹೆಚ್. ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನದ ಪಟ್ಟ
ಜಿಐಎಸ್‌ ಸರ್ವೇ ಪೂರ್ಣ, ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ: ಮೇಯರ್‌ ಬಿಜವಾಡ ಭರವಸೆ