ಕನ್ನಡಪ್ರಭ ವಾರ್ತೆ ಕೋಲಾರ
ನೀರು ಮನುಷ್ಯ, ಪ್ರಾಣಿ, ಗಿಡಮರಗಳ ಜೀವ ರಕ್ಷಣೆಗೆ ಅಮೂಲ್ಯವಾಗಿದ್ದು, ನೀರಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ನೀರು ಮತ್ತು ನೀರಿನ ಮೂಲಗಳನ್ನು ರಕ್ಷಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಕೋಲಾರದ ರವಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ರವಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಹಿಮಪಾತ ರಕ್ಷಣೆ’ ಘೋಷವಾಕ್ಯದೊಂದಿಗೆ ವಿಶ್ವಜಲ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಬರುವ ಕಾಯಿಲೆಗಳಿಂದಾಗಿ ೧೬ ಲಕ್ಷ ಜನ ಸಾಯುತ್ತಾರೆ ಎಂದ ಅವರು, ವಿಶ್ವದ ಶೇ.೨೫ ರಷ್ಟು ಮಂದಿಗೆ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ, ಆದ್ದರಿಂದ ನೀರಿನ ಮಹತ್ವ ಅರಿತು ಬಳಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಕೆರೆಗಳಿಗೆ ಸಾರ್ವಜನಿಕರು ತ್ಯಾಜ್ಯ ವಸ್ತುಗಳು, ಕಸ ಹಾಕಿ ಕೆರೆಗಳನ್ನು ಕಲುಷಿತಗೊಳಿಸುತ್ತಿದ್ದಾರೆ. ಆದ್ದರಿಂದ ಕೆರೆಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ನೆರೆ, ಹೊರೆಯವರ ಆರೋಗ್ಯವನ್ನು ಕಾಪಾಡಲು ಕೆರೆ ಸ್ವಚ್ಛತೆ ಮಾಡುತ್ತಿದ್ದು, ಕೋಲಾರದಲ್ಲಿ ನೀರಿಲ್ಲದೆ ಬರ ಪರಿಸ್ಥಿತಿ ಇದೆ. ಇದನ್ನು ಹೊಗಲಾಡಿಸಲು ಜಲ ಸಂರಕ್ಷಣೆ ಆಗಬೇಕು. ಕೆರೆಗಳ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮುಂದಿನ ಪೀಳಿಗೆಯವರಿಗೆ ಕೆರೆಗಳನ್ನು ಉಳಿಸಬೇಕು. ಅಂತರ್ಜಲ ಮಟ್ಟವು ಹೆಚ್ಚಾಗಲು ಕೆರೆಗಳು ಮುಖ್ಯ ಎಂದು ತಿಳಿಸಿದರು. ನ್ಯಾಯಾಧೀಶರು, ಬಾಲ್ಯವಿವಾಹ ತಡೆ, ಬಾಲಕಾರ್ಮಿಕ ತಡೆ ಕಾಯಿದೆಗಳು, ಫೋಕ್ಸೊ ಕಾಯಿದೆ, ಮಹಿಳಾ ದೌರ್ಜನ್ಯ ತಡೆ ಕಾಯಿದೆ, ವಾಹನ ಚಾಲನಾ ಪರವಾನಗಿ ಪಡೆಯುವುದು ಮತ್ತಿತರ ಕಾನೂನುಗಳ ಅರಿವು ಮೂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿ ವಿದ್ಯಾಸಂಸ್ಥೆ ನಿರ್ದೇಶಕ ನರೇಶಬಾಬು ವಹಿಸಿದ್ದು, ಕೋಲಾರ ಜಿಲ್ಲೆಯಲ್ಲಿ ನೀರಿಗೆ ತುಂಬಾ ತೊಂದರೆ ಇದೆ. ಕೆರೆಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿ, ನೀರನ್ನು ಅವಶ್ಯಕತೆ ಇದ್ದಷ್ಟು ಬಳಸಿ, ನೀರನ್ನು ವ್ಯರ್ಥ ಮಾಡಬೇಡಿ. ಪ್ರಪಂಚದಲ್ಲಿ ಅತ್ಯಮೂಲ್ಯ ವಸ್ತು ನೀರು, ಅದನ್ನು ಉಳಿಸಬೇಕು ಎಂದು ಕರೆ ನೀಡಿದರು.
ಮನುಷ್ಯನಿಗೆ ಊಟ ಇಲ್ಲದಿದ್ದರೆ ಇರಬಹುದು, ಆದರೆ ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ನೀರನ್ನು ಸರಿಯಾದ ರೀತಿ ಉಪಯೋಗಿಸಬೇಕು. ನೀರನ್ನು ವ್ಯರ್ಥ್ಯ ಮಾಡಬಾರದು. ಸಂವಿಧಾನದಲ್ಲಿ ತಿಳಿಸುವಂತೆ ಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಜಲವನ್ನು ಉಳಿಸುವುದರಿಂದ ನಮ್ಮ ಆರೋಗ್ಯ ಮತ್ತು ಪರಿಸರವು ಚೆನ್ನಾಗಿರುತ್ತದೆ ಎಂದು ತಿಳಿಸಿದರು.ಬಿಎಡ್ ಕಾಲೇಜು ಪ್ರಾಂಶುಪಾಲ ಮಂಜುನಾಥರೆಡ್ಡಿ, ಪ್ರೊ.ಚಿನ್ನಪ್ಪ, ಶಿಕ್ಷಕ ಚೌಡಪ್ಪ, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಹೂವಳ್ಳಿ ನಾಗರಾಜ್, ಅರೆಕಾಲಿಕ ಕಾನೂನು ಸೇವಕಿ ಶ್ಯಾಮಲಾ ಇದ್ದರು.