ಕನಕಪುರ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ಮಹಾರಾಜರಾಗಿ ಹತ್ತನೇ ವಯಸ್ಸಿಗೆ ಪಟ್ಟಾಭಿಷಿಕ್ತರಾದವರು. ಅನೇಕ ಶಾಶ್ವತ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಉಳಿದ ಮಹನೀಯರು ಎಂದು ಮುಖ್ಯ ಶಿಕ್ಷಕಿ ಕೆ.ಎನ್.ಸುನೀತಾ ಹೇಳಿದರು.
ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಸಿ.ಎಸ್.ರಾಜು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನದ ಅಭಿವೃದ್ಧಿಯ ಹರಿಕಾರರೆಂದೇ ಪ್ರಸಿದ್ಧರು. ಅವರ ಸಾಧನೆಗಳು ಮತ್ತು ಕೊಡುಗೆಗಳು ಇಂದಿಗೂ ಜೀವಂತ ಸಾಕ್ಷಿಯಾಗಿವೆ. ನಾಲ್ವಡಿ ಮಹಾರಾಜರ ಆಡಳಿತಾವಧಿ(1902-1940) ಮೈಸೂರು ಇತಿಹಾಸದ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಏಷ್ಯಾದ ಮೊದಲ ಶಿವನಸಮುದ್ರ ಜಲವಿದ್ಯುತ್ ಯೋಜನೆ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC)ಸ್ಥಾಪನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಹಾಗೂ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಗಳನ್ನು ಆರಂಭಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಭಾರತದ ಮೊದಲ ಸಂಸ್ಥಾನ ಮೈಸೂರು ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.
ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕದ ಪ್ರತಿಯೊಬ್ಬ ರೈತರು ಸುಮಾರು 20ರಿಂದ 30 ಎಕರೆ ಜಮೀನು ಹೊಂದಿದ್ದಾರೆ. ರೈತರು ಅಭಿವೃದ್ಧಿ ಕಾಣಲು ಆಗುತ್ತಿಲ್ಲ, ಮೈಸೂರು ಭಾಗದ ರೈತರು ಅರ್ಧ ಎಕರೆ ಒಂದು ಎಕರೆ ಜಮೀನಿದ್ದರು ಸದೃಢರಾಗಿದ್ದಾರೆ. ಕಾರಣ ನಾಲ್ವಡಿಯವರು ನೀರಾವರಿ ಕ್ಷೇತ್ರಕ್ಕೆ ಕೊಟ್ಟ ದೊಡ್ಡ ಕೊಡುಗೆ ಎಂದು ಹೇಳಿದರು.ಜಯಕರ್ನಾಟಕ ಸಂಘಟನೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ನಾಲ್ವಡಿಯವರ ಕೊಡುಗೆ ದೇಶಕ್ಕೆ ಮಾದರಿಯಾಗಿದೆ. ಅವರ ದೂರದೃಷ್ಟಿಯಿಂದ ಮಂಡ್ಯದ ಜನತೆ ಹಾಗೂ ಬೆಂಗಳೂರಿನ ಜನರ ನೆಮ್ಮದಿಯ ಬದುಕಿಗೆ ಸಾಧ್ಯವಾಗಿದೆ. ನಮ್ಮದೇ ಕ್ಷೇತ್ರದ ಶಾಸಕರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕಾವೇರಿ ನೀರಿನ ಯೋಜನೆಯಿಂದ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ. ಕಾವೇರಿ ನದಿ ಮೇಕೆದಾಟು ನಿಮ್ಮ ಕನಸಿನ ಯೋಜನೆಯಾಗಿದೆ. ತಾವು ಮುಖ್ಯಮಂತ್ರಿಗಳಾಗಿದ್ದೀರಿ. ನಿಮ್ಮ ಅವಧಿಯಲ್ಲಿಯೇ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಸಿ.ವೆಂಕಟೇಶ, ಪತ್ರಕರ್ತ ಎಂ.ಎನ್. ಸುರೇಶ್, ಶಾಲಾ ಶಿಕ್ಷಕ-ಶಿಕ್ಷಕಿಯರು, ಆಡಳಿತ ಮಂಡಳಿ ಸಿಬ್ಬಂದಿ ಮೊದಲಾದವರು ಪಾಲ್ಗೊಂಡಿದ್ದರು.
ಕನಕಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಕೆ.ಎನ್.ಸುನೀತಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಸಿ.ವೆಂಕಟೇಶ, ಪತ್ರಕರ್ತ ಎಂ.ಎನ್. ಸುರೇಶ್ ಇತರರು ಪಾಲ್ಗೊಂಡಿದ್ದರು.