ಬದುಕಿನ ಕೊನೆ ವರೆಗೆ ಜತೆಗೆ ಬರುವುದು ಧರ್ಮವೇ ಹೊರತು ಸಂಪತ್ತಲ್ಲ: ಅಭಿನವ ಮೃತ್ಯುಂಜಯ ಸ್ವಾಮೀಜಿ

KannadaprabhaNewsNetwork |  
Published : Dec 18, 2025, 01:00 AM IST
17ಎಚ್‌ವಿಆರ್2 | Kannada Prabha

ಸಾರಾಂಶ

ಹಾವೇರಿಯ ಅಶ್ವಿನಿ ನಗರದ ಶಿರಡಿ ಸಾಯಿಬಾಬಾ ಮಂದಿರ ಎದುರು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪಾಲ್ಗೊಂಡಿದ್ದರು.

ಹಾವೇರಿ: ಬದುಕಿನ ಕೊನೆಯ ಗಳಿಗೆಯಲ್ಲೂ ನಮ್ಮ ಜತೆಗೆ ಬರುವುದು ಧರ್ಮವೇ ಹೊರತು ಭೌತಿಕ ಸಂಪತ್ತು ಅಲ್ಲ. ಧರ್ಮವನ್ನು ಯಾರೂ ದೂರ ಮಾಡಬಾರದು. ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿನ ಅಶ್ವಿನಿ ನಗರದ ಶಿರಡಿ ಸಾಯಿಬಾಬಾ ಮಂದಿರ ಎದುರು ಜರುಗಿದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧರ್ಮ ದರ್ಶನ ಮಾಡುವ ಮೂಲಕ ಧರ್ಮದಿಂದ ದೂರವಾಗುತ್ತಿರುವ ಜನರನ್ನು ಮತ್ತೆ ಧರ್ಮದ ಕಡೆಗೆ ಬರುವಂತೆ ಮಾಡಿದ ಶ್ರೇಯಸ್ಸು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಮಾನವೀಯತೆ ಹಾಗೂ ಮುಗ್ಧತೆಯಿಂದ ಜಗತ್ತನ್ನು ಗೆಲ್ಲಬಹುದು ಎಂಬುದನ್ನು ಅರಿತಿರುವ ಸದಾಶಿವ ಸ್ವಾಮೀಜಿ ತಾಲೂಕಿನ 70 ಗ್ರಾಮಗಳಲ್ಲಿ ಸಂಚರಿಸಿ ದುಶ್ಚಟಗಳಿಂದ ಜನರನ್ನು ದೂರವಿಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಜನ ಜಾಗೃತಿ ಸಮಾವೇಶ ಹಾಗೂ ಧರ್ಮ ದರ್ಶನದ ಮೂಲಕ ಧರ್ಮ ರಕ್ಷಣೆಗೆ ಸಂಕಲ್ಪ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮ ರಕ್ಷಣೆ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಎಲ್ಲ ಶ್ರೀಗಳನ್ನು ಕರೆದುಕೊಂಡು ಮನೆ-ಮನಗಳತ್ತ ಬರುತ್ತಿರುವರು. ಇದೊಂದು ಅಮೃತ ಗಳಿಗೆ ಹಾಗೂ ಭಕ್ತರ ಭಕ್ತಿಯ ಉತ್ಸವ. ಡಿ. 27ರಂದು ಬಸವ ಬುತ್ತಿ ಕಾರ್ಯಕ್ರಮ ಜರುಗಲಿದೆ. ಪ್ರತಿ ಮನೆಗೂ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಬಟ್ಟೆ ಕೊಡಲಾಗುವುದು. ಅದನ್ನು ಧರಿಸಿ ಭಕ್ತರು ಬರಬೇಕು. 6001 ಜನರ ಸಂಘಟನೆಯಿಂದ ದಾಸೋಹ ಮೇಳ ಯಶಸ್ವಿಯಾಗಲಿದೆ ಎಂದು ಹೇಳಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪೂಜಿಸುವ ಪರಂಪರೆ ಭಾರತದಲ್ಲಿದೆ. ಬೆಳಗ್ಗೆ ಬೇಗನೇ ಏಳುವ ಜನರಿಗೆ ದುಃಖವನ್ನು ದೂರ ಮಾಡುವ ಶಕ್ತಿಯಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ. ಆರೋಗ್ಯ ಮತ್ತು ಆಯುಷ್ಯ ಹೆಚ್ಚಿಸಲು ದುಶ್ಚಟಗಳ ಹೋಮ ಮಾಡಬೇಕಿದೆ ಎಂದರು.

ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಭಕ್ತಿ ಎಂಬ ಬಿರುಗಾಳಿಗೆ ಬೀಸುತ್ತಿರುವ ಈ ಸಂದರ್ಭದಲ್ಲಿ ದುಶ್ಚಟಗಳನ್ನು ತೂರಬೇಕಿದೆ ಎಂದರು.

ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಕೃಷ್ಣ ಮಂದಿರದಿಂದ ಆರಂಭವಾದ ಪಾದಯಾತ್ರೆ ಅಶ್ವಿನಿ ನಗರದಲ್ಲಿ ಸಂಚರಿಸಿ ಶಿರಡಿ ಸಾಯಿಬಾಬಾ ಮಂದಿರ ಎದುರು ಸಮಾಪ್ತಗೊಂಡಿತು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು ಪಾದಯಾತ್ರೆಯಲ್ಲಿ ಸಾಗಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಪಿ.ಡಿ. ಶಿರೂರ, ಜಗದೀಶ ಬೆಟಗೇರಿ, ರಾಜಣ್ಣ ಮಾಗನೂರ, ಮಹೇಶ ಚಿನ್ನಿಕಟ್ಟಿ, ವಿಜಯಣ್ಣ ಗೊಡಚಿ, ಕೆ.ಸಿ. ಪಾವಲಿ, ರಾಜಣ್ಣ ಕಲ್ಲಮ್ಮನವರ, ಗಿರೀಶ ತುಪ್ಪದ ಇದ್ದರು. ಸಿದ್ಧಲಿಂಗಯ್ಯ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ನಭಾಗ್ಯದಂತೆ ಪುಸ್ತಕ ಭಾಗ್ಯವೂ ಜಾರಿಯಾಗಲಿ; ಕಥೆಗಾರ ಡಾ.ಅಮರೇಶ ನುಗಡೋಣಿ
ಮಕ್ಕಳ ಬೆಳೆವಣಿಗೆಗೆ ಉತ್ತಮ ವಾತಾವರಣ ಅವಶ್ಯ