‘ಕೈ’ ಸಂವಿಧಾನ ರಕ್ಷಕ ಎಂಬುದೇ ಹಾಸ್ಯಾಸ್ಪದ: ಅಣ್ಣಮಲೈ

KannadaprabhaNewsNetwork |  
Published : Jun 26, 2024, 01:30 AM IST
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ | Kannada Prabha

ಸಾರಾಂಶ

‘ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ’ ಸಂವಾದ ಕಾರ್ಯಕ್ರಮದಲ್ಲಿ ತಮಿಳು ನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದಲ್ಲಿ ತುರ್ತು ಪರಿಸ್ಥಿತಿ ತಂದು ನಾಗರಿಕ ಹಕ್ಕನ್ನು ಕಸಿದಿದ್ದು ಮಾತ್ರವಲ್ಲದೆ, ಸರ್ಕಾರದ ಎಲ್ಲ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ಸಿಗರು ಪ್ರಸ್ತುತ ಸಂವಿಧಾನದ ಪ್ರತಿ ಹಿಡಿದು ರಕ್ಷಿಸುತ್ತೇವೆ ಎನ್ನುತ್ತಿರುವುದು 21ನೇ ಶತಮಾನದ ಅತೀದೊಡ್ಡ ಹಾಸ್ಯ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದರು.

ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ಬದಲಾವಣೆ ಉದ್ದೇಶದಿಂದಲೇ ಬಿಜೆಪಿ 400 ಸೀಟುಗಳನ್ನು ಕೇಳುತ್ತಿದೆ ಎಂದು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಪಪ್ರಚಾರ ಮಾಡಿತು. ವಾಸ್ತವದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ಸಾಕಷ್ಟು ಬದಲಾವಣೆ ತರುವ ಮೂಲಕ ಚ್ಯುತಿ ತಂದಿದೆ. ಆದರೆ, ಈಗ ಕಾಂಗ್ರೆಸ್‌ ಮುಖಂಡರು ಸಂಸತ್‌ನೊಳಗೆ ನಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇಂದಿರಾ ಗಾಂಧಿ ಜಾರಿಗೊಳಿಸಿದ ತುರ್ತು ಪರಿಸ್ಥಿತಿ ಬಗ್ಗೆ, ಅದು ಜಾರಿಯಲ್ಲಿದ್ದ 21 ತಿಂಗಳ ಕಾಲ ಜನತೆ ಅನುಭವಿಸಿದ ಕರಾಳತೆ ಕುರಿತು ವಿಸ್ತ್ರತ ಅಧ್ಯಯನ ಆಗಬೇಕು. ಇತಿಹಾಸದ ತಪ್ಪನ್ನು ಅರಿತು ಜಾಗೃತರಾಗಬೇಕು. ಆ ಮೂಲಕ ದೇಶದ ಜನತೆ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಏಕಾಏಕಿ ಜಾರಿಯಾದುದಲ್ಲ. ಇಂದಿರಾ ನೇತೃತ್ವದ ಆರಂಭಿಕ ಸರ್ಕಾರದ ಪ್ರತಿ ಹೆಜ್ಜೆಯೂ ದೇಶವನ್ನು ತುರ್ತು ಪರಿಸ್ಥಿತಿಯತ್ತ ಕೊಂಡೊಯ್ಯಿತು. ಸಂವಿಧಾನ ತಿದ್ದುಪಡಿ, ನಾಗರಿಕ ಹಕ್ಕುಗಳ ನಾಶ, ಹಣಕಾಸು ಸಂಸ್ಥೆಗಳ ದುರುಪಯೋಗ ಸೇರಿ ಎಲ್ಲವನ್ನೂ ದೇಶ ಅನುಭವಿಸಬೇಕಾಯಿತು ಎಂದು ತಿಳಿಸಿದರು.

ಅಂಬೇಡ್ಕರ್ ಕುರಿತು, ಅವರಿಂದ ರಚಿಸಲ್ಪಟ್ಟ ಸಂವಿಧಾನದ ಕುರಿತಂತೆ‌ ಯುವಕರಿಗೆ ಹೆಚ್ಚಿನ ಅರಿವು ಅಗತ್ಯ. ಸಂವಿಧಾನದ ರಚನೆ ವೇಳೆ ಸಾಕಷ್ಟು ಒತ್ತಡ ಎದುರಿಸಿದರು. ಪ್ರತಿ ಕಲಂ ಸೇರ್ಪಡೆ ಬಗ್ಗೆ ಅವರು ನೀಡಿರುವ ಉತ್ತರ ಪಾಂಡಿತ್ಯಪೂರ್ಣವಾಗಿದೆ. ಆದರೆ, ಕಾಂಗ್ರೆಸ್‌ ಸಚಿವ ಸಂಪುಟದಿಂದ ಹೊರಬರುವಾಗ ಅಂಬೇಡ್ಕರ್ ಬರೆದುಕೊಟ್ಟ ರಾಜೀನಾಮೆ ಪತ್ರ ಓದಿದ ಯಾರೂ ಆ ಪಕ್ಷವನ್ನು ಕ್ಷಮಿಸಲಾರರು ಎಂದರು.

ಪ್ರಾಸ್ತಾವಿಕ ಮಾತನಾಡಿದ ದಲಿತ ಮುಖಂಡ ಪಟಾಪಟ್ ಶ್ರೀನಿವಾಸ್, ಭಾರತದ ಸಂವಿಧಾನವನ್ನು ಕತ್ತಲಲ್ಲಿ ಇಟ್ಟು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಆದರೆ, ಇಂದು ಕೇವಲ ಅಧಿಕಾರಕ್ಕಾಗಿ ಸಂವಿಧಾನದ ಪರ ಮಾತನಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

ರಾಜಕೀಯ ಚಿಂತಕ ರವೀಂದ್ರ ರೇಷ್ಮೆ ಮಾತನಾಡಿದರು. ಈ ವೇಳೆ ತುರ್ತು ಪರಿಸ್ಥಿತಿಯ ಹೋರಾಟಗಾರ್ತಿ ಗಾಯತ್ರಿ ಚ.ಸು.ಹನುಮಂತ ರಾವ್ ಅವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌