- ಅಂತಾರಾಷ್ಟ್ರೀಯ ಮದ್ಯ ವ್ಯಸನ- ಮಾದಕ ವಸ್ತು ವಿರೋಧಿ ದಿನಾಚರಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳಿಗೆ ಆರೋಗ್ಯವನ್ನು ಹದಗೆಡಿಸುವ ಚಟ ಹಾಗೂ ಪ್ರೀತಿ ಪ್ರೇಮದಂಥ ಆಕರ್ಷಣೆ ಸಹಜ. ಬದಲಾಗಿ ಕಲಿಕೆಯ ವಯಸ್ಸಿನಲ್ಲಿ ವಿದ್ಯಾರ್ಜ ನೆ ಪೂರೈಸಿ ನಿಗಧಿತ ಗುರಿ ತಲುಪುವುದೇ ಜಾಣತನ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಸಲಹೆ ನೀಡಿದರು.ನಗರದ ಬಿಜಿಎಸ್ ಶಾಲಾವರಣದಲ್ಲಿ ಬಿಜಿಎಸ್ ಸಮೂಹ ಸಂಸ್ಥೆ , ಶ್ರೀ ಶಕ್ತಿ ಆಯೋಸಿಯೇಷನ್ ಐಆರ್.ಸಿಎ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮದ್ಯ ವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ನಶೆ ಪದಾರ್ಥಗಳು ಅತಿ ಹೆಚ್ಚು ವೇಗದಲ್ಲಿ ಯುವ ಸಮೂಹವನ್ನು ಆವರಿಸುತ್ತಿದೆ. ಧೂಮಪಾನ, ಮದ್ಯ ಸೇವನೆ, ಗಾಂಜಾ, ಅಫೀಮು ಆರಂಭದಲ್ಲಿ ಖುಷಿಕೊಟ್ಟರು, ಕಾಲ ಕಳೆಯದಂತೆ ಶರೀರದ ಅಂಗಾಂಗಗಳನ್ನು ಹಂತ ಹಂತವಾಗಿ ಹಾಳು ಮಾಡುತ್ತವೆ. ವಿದ್ಯಾರ್ಥಿಗಳು ದುರಭ್ಯಾಸಗಳಿಗೆ ದಾಸರಾಗದೇ ವಿದ್ಯಾಭ್ಯಾಸದ ಕಡೆ ಹೆಚ್ಚು ಒಲವು ಹೊಂದಬೇಕು ಎಂದರು.ಮಾದಕ ವಸ್ತು ಸೇವಿಸಿದರೆ ಸಾವು ಸಂಭವಿಸಲಿದೆ ಎಂಬ ಎಚ್ಚರಿಕೆ ಗಂಟೆ ನೀಡಿದರೂ ಜನ ಸಾಮಾನ್ಯರು ಅಲ್ಲ ಗಳೆಯುತ್ತಾರೆ. ಇದರಿಂದ ಕರುಳು, ಸಣ್ಣ ಕರುಳು, ಜಠರ, ಹೃದಯದಲ್ಲಿ ಸಣ್ಣ ಸಣ್ಣ ರಂಧ್ರಗಳಾಗಿ ಆರೋಗ್ಯ ಸಂಪತ್ತು ಕ್ಷೀಣಿಸುತ್ತದೆ. ಹೀಗಾಗಿ ಕಾಯಿಲೆಗಳು ಬರುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.ಆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸುತ್ತಿರುವುದು ಹೆಮ್ಮೆಯ ಸಂಗತಿ. ಬಾಲ್ಯವಸ್ಥೆಯಲ್ಲೇ ಅರಿವಿನ ಜ್ಞಾನ ತುಂಬಿದರೆ ಯೌವ್ವನದಲ್ಲಿ ಪರಿವರ್ತನೆಗೊಳ್ಳಲು ಸಾಧ್ಯ. ಇದೀಗ ಪ್ರತಿ ಮನೆ ಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿ ಭವಿಷ್ಯದ ಮಕ್ಕಳನ್ನು ಹಾಳು ಮಾಡುತ್ತಿರುವುದು ದುರ್ದೈವ ಎಂದರು.ಯೌವ್ವನದಲ್ಲಿ ಪ್ರೀತಿ ಪ್ರೇಮ ಕೇವಲ ಆಕರ್ಷಣೆಯಷ್ಟೇ. ಓದುವ ವಯಸ್ಸಿನಲ್ಲಿ ಹಳಿ ತಪ್ಪಿಸಿದರೆ ಇಡೀ ಬದುಕೇ ನರಕ ವಾಗುತ್ತದೆ. ಒಂದು ವೇಳೆ ಆಚಾತುರ್ಯ ಸಂಭವಿಸಿದರೆ ಪಾಲಕರು ಬೆಂಬಲಿಸುವುದಿಲ್ಲ. ಮತ್ತೊಂದೆಡೆ ಪ್ರೀತಿಸಿದ ಹುಡುಗ ದ್ರೋಹವೆಸಗಿದರೆ ಬದುಕು ಸಾವಿಗಿಂತ ಕಡೆ. ಹೀಗಾಗಿ ನಿಮ್ಮ ಗುರಿ ಪೂರೈಸಿದ ನಂತರ ಆಸಕ್ತಿ ತೋರಬೇಕು ಎಂದು ಕಿವಿ ಮಾತು ಹೇಳಿದರು.
ನಗರ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಮಾತನಾಡಿ, ಮಾದಕ ದ್ರವ್ಯಗಳ ಸೇವಿಸುವ ಮನುಷ್ಯನನ್ನು ಸಮಾಜ ನೋಡುವ ದೃಷ್ಟಿಯಿಂದ ಬೇರೆ. ಸದಾಕಾಲ ನಶೆ ಪದಾರ್ಥಗಳಿಂದ ಶಾರೀರಿಕ ಹಾಗೂ ಮಾನಸಿಕ ಸ್ಥಿಮಿತತೆ ಕಳೆದು ಕೊಂಡು ಜೀವನವೇ ದುಸ್ತರವಾಗಲಿದೆ. ಈ ಹಾವಳಿ ಕಾಲೇಜುಗಳಲ್ಲಿ ಧಾವಿಸುತ್ತಿವೆ. ಹೀಗಾಗಿ ಇಂತಹ ಮಾಹಿತಿಗಳನ್ನು ಮಕ್ಕಳಿಗೆ ನೀಡುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಹೇಳಿದರು.ವಿಶೇಷತೆಯಿಂದ ಕೂಡಿದ ಭಾರತೀಯ ಸಂಸ್ಕೃತಿಯಿಂದ ಮಕ್ಕಳು ಸಂಸ್ಕಾರವಂತರಾಗಿ ಬದುಕುವುದನ್ನು ರೂಢಿಸಿ ಕೊಳ್ಳಬೇಕು. ಭವಿಷ್ಯದ ಪ್ರಜೆಗಳು ಶ್ರೇಷ್ಠ ಪ್ರಜೆಗಳಾಗುವುದೇ ಹಿರಿಯರ ಆಶಯ. ಹಾಗಾಗಿ ಸರಿ ತಪ್ಪಿನ ಅರಿವು ತಿಳಿದಿರುವ ವಿದ್ಯಾರ್ಥಿಗಳು ಮಾನಸಿಕವಾಗಿ ಗಟ್ಟಿಯಾಗಬೇಕು ಎಂದು ತಿಳಿಸಿದರು.ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ. ಕೆ.ಎ.ಅನೀತ್‌ಕುಮಾರ್ ಮಾತನಾಡಿ, ಕಳೆದ ಇಪ್ಪತ್ತೈದು ವರ್ಷ ಗಳಿಂದ ಅಸೋಸಿಯೇಷನ್ ಮದ್ಯ ವ್ಯಸನಿಗಳ ದಾಸರಾಗಿರುವ ವ್ಯಕ್ತಿಗಳಿಗೆ ಸಮಗ್ರ ಚಿಕಿತ್ಸೆ ನೀಡುವ ಮೂಲಕ ಸುಮಾರು ಐದು ಸಾವಿರಕ್ಕೂ ಹೆಚ್ಚು ಮದ್ಯವ್ಯಸನಿಗಳನ್ನು ಗುಣಮುಖರಾಗಿಸಿ ಸಾತ್ವಿಕ ಜೀವನಕ್ಕೆ ದಾರಿ ಮಾಡಿಕೊಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ, ವಿಕಲಚೇತನರ ಕಲ್ಯಾಣಾಧಿಕಾರಿ ಎಂ. ವೀರಭದ್ರಯ್ಯ, ಶ್ರೀ ಶಕ್ತಿ ಅಸೋಸಿಯೇಷನ್‌ನ ವ್ಯವಸ್ಥಾಪಕ ಮಂಜುನಾಥ್, ಬಿಜಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್, ಅಸೋಸಿಯೇಷನ್ ಕಾರ್ಯದರ್ಶಿ ವಿ.ಎಂ.ಶಶಿಕುಮಾರ್ ಉಪಸ್ಥಿತರಿದ್ದರು.28 ಕೆಸಿಕೆಎಂ 1ಚಿಕ್ಕಮಗಳೂರಿನ ಬಿಜಿಎಸ್ ಶಾಲಾವರಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮದ್ಯ ವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ನ್ಯಾಯಾಧೀಶ ವಿ. ಹನುಮಂತಪ್ಪ ಉದ್ಘಾಟಿಸಿದರು. ಅಭಯ್ ಪ್ರಕಾಶ್, ಜೆ.ಜಿ. ಸುರೇಂದ್ರ, ಚಂದ್ರಶೇಖರ್ ಇದ್ದರು.