ಚರ್ಚೆಯಷ್ಟೇ ಆಯಿತು, ಪರಿಹಾರ ಸಿಗಲಿಲ್ಲ:ಚೂನಪ್ಪ ಪೂಜೇರಿ

KannadaprabhaNewsNetwork |  
Published : Oct 27, 2026, 04:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಎರಡು ಗಂಟೆ ಚರ್ಚೆ ನಡೆಸಿದರೂ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರತಿ ಟನ್‌ ಕಬ್ಬಿಗೆ ರಾಜ್ಯ ಸರ್ಕಾರ ₹1,000 ಹೆಚ್ಚುವರಿ ನೆರವು ಘೋಷಿಸುವವರೆಗೆ ಗುರ್ಲಾಪುರದ ಚಳವಳಿ ಮುಂದುವರಿಯಲಿದೆ. ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಎರಡು ಗಂಟೆ ಚರ್ಚೆ ನಡೆಸಿದರೂ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರತಿ ಟನ್‌ ಕಬ್ಬಿಗೆ ರಾಜ್ಯ ಸರ್ಕಾರ ₹1,000 ಹೆಚ್ಚುವರಿ ನೆರವು ಘೋಷಿಸುವವರೆಗೆ ಗುರ್ಲಾಪುರದ ಚಳವಳಿ ಮುಂದುವರಿಯಲಿದೆ. ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಸ್ಪಷ್ಟಪಡಿಸಿದರು.

ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಅವರೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆರ್ಥಿಕ ಸಂಕಷ್ಟ ಮುಂದಿಟ್ಟು ರೈತರ ಬೇಡಿಕೆ ಬದಿಗೊತ್ತಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಸರ್ಕಾರ ಸಾಲ ಮಾಡಿಯಾದರೂ ರೈತರಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ ಟನ್‌ಗೆ ₹1,000 ನೆರವು ನೀಡಬೇಕು ಎಂಬುದು ನಮ್ಮ ಗಟ್ಟಿಯಾದ ಬೇಡಿಕೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರ ತನ್ನ ಪಾಲಿನ ನೆರವು ಘೋಷಿಸಬೇಕು. ಕಾರ್ಖಾನೆ ಮಾಲೀಕರು ತಾವು ನೀಡುವ ದರವನ್ನೂ ಸ್ಪಷ್ಟಪಡಿಸಬೇಕು. ಬರೀ ಸಭೆ ನಡೆಸಿ ಚರ್ಚಿಸಿದರೆ ಸಾಲದು. ರೈತರ ಕೈಗೆ ಹಣ ಬರುವಂತಹ ನಿರ್ಧಾರವಾಗಬೇಕು ಎಂದರು.

ಕಾರ್ಖಾನೆ ಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಹಾಗೂ ಹಣಕಾಸಿನ ವಿಚಾರ ಪರಿಶೀಲಿಸಲು ಮುಖ್ಯಮಂತ್ರಿ ಕಾಲಾವಕಾಶ ಕೇಳಿದ್ದಾರೆ. ಸರ್ಕಾರದಿಂದ ಯಾವ ನಿರ್ಧಾರ ಬರುತ್ತದೆ ಎಂಬುದನ್ನು ನೋಡುತ್ತೇವೆ. ಆದರೆ, ಕಾಲಾವಕಾಶ ಕೇಳಲಾಗಿದೆ ಎಂಬ ಕಾರಣಕ್ಕೆ ಚಳವಳಿ ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿದರು.

ಗುರ್ಲಾಪುರದಲ್ಲಿ ರೈತರು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಸ್ಪಷ್ಟ ಉತ್ತರ ನೀಡುವ ಹೊಣೆ ಸರ್ಕಾರಕ್ಕಿದೆ. ರಾತ್ರಿ ಎಷ್ಟೇ ಹೊತ್ತಾದರೂ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರು ಚರ್ಚಿಸಿ ದರ ಘೋಷಿಸಬೇಕು. ಸಮಸ್ಯೆ ಬಗೆಹರಿಸಿಯೇ ಮುಂದಿನ ಹೆಜ್ಜೆ ಇಡಬೇಕು.

ಕಬ್ಬಿನ ದರ ಹಾಗೂ ಸರ್ಕಾರದ ನೆರವು ಘೋಷಣೆಯಾಗುವವರೆಗೆ ಕಾರ್ಖಾನೆಗಳ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೂಜೇರಿ ಹೇಳಿದರು.

ಕಾರ್ಖಾನೆಗಳು ಆರಂಭವಾಗಬೇಕು ಎಂಬ ಅರಿವು ನಮಗೂ ಇದೆ. ಆದರೆ, ರೈತನಿಗೆ ಎಷ್ಟು ಹಣ ಸಿಗುತ್ತದೆ ಎಂಬುದು ಸ್ಪಷ್ಟವಾಗದಿದ್ದರೆ ಹೇಗೆ ಸಹಕಾರ ನೀಡುವುದು? ಮೊದಲು ಕಾರ್ಖಾನೆ ಮಾಲೀಕರು ತಮ್ಮ ದರವನ್ನು ಪ್ರಕಟಿಸಬೇಕು. ಸರ್ಕಾರವೂ ತನ್ನ ನೆರವು ಘೋಷಿಸಬೇಕು ಎಂದರು.

ಕಾರ್ಖಾನೆಗಳ ಆರಂಭ ವಿಳಂಬವಾಗಿ ರೈತರ ಕಬ್ಬು ಒಣಗಿದರೆ ಯಾರು ಹೊಣೆ ಎಂಬ ಪ್ರಶ್ನೆಗೆ, ಮಾಲೀಕರು ತಾವು ನೀಡಬಹುದಾದ ದರವನ್ನು ಮೊದಲು ಸ್ಪಷ್ಟಪಡಿಸಬೇಕು. ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ಬಂದ್‌ ಕರೆ ಇನ್ನೂ ಅಂತಿಮವಲ್ಲ

ಬೇಡಿಕೆ ಈಡೇರದಿದ್ದರೆ ರಾಜ್ಯ ಬಂದ್‌ ನಡೆಸುವ ಕುರಿತು ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಲಾಗುವುದು. ಆದರೆ, ಬಂದ್‌ ಕರೆಯನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಪೂಜೇರಿ ಸ್ಪಷ್ಟಪಡಿಸಿದರು.

ಶಾಂತಕುಮಾರ್‌ ಸೇರಿದಂತೆ ರಾಜ್ಯದ ವಿವಿಧ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಸರ್ಕಾರದ ನಿರ್ಧಾರ ಬಂದ ಬಳಿಕ ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಹೋರಾಟದ ಸ್ವರೂಪವನ್ನು ತೀರ್ಮಾನಿಸುತ್ತೇವೆ’ ಎಂದರು.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳದ ಬೇಡಿಕೆಯಿಂದಲೂ ಹಿಂದೆ ಸರಿಯುವುದಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಕಬ್ಬು ಹಾಗೂ ಅದರ ಉಪ ಉತ್ಪನ್ನಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದ ತೆರಿಗೆ ಆದಾಯ ಬರುತ್ತಿದೆ. ಅದರಲ್ಲಿನ ಒಂದು ಪಾಲನ್ನು ಕಬ್ಬು ಬೆಳೆಗಾರರಿಗೆ ನೀಡಬೇಕು ಎಂದು ಪೂಜೇರಿ ಪ್ರತಿಪಾದಿಸಿದರು.

ಸಭೆ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ,ಬರೀ ಸಭೆ ಮತ್ತು ಚರ್ಚೆ ಮಾತ್ರ ಆಗಿದೆ. ಪರಿಹಾರ ಆಗಿಲ್ಲ. ನಮಗೆ ಚರ್ಚೆ ಬೇಡ, ಪರಿಹಾರ ಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!