ಕಡಲ ತೀರದ ಆದಾಯ ಕಾರವಾರ ನಗರಸಭೆಗೆ ನೀಡುವಂತೆ ಠರಾವು

KannadaprabhaNewsNetwork | Published : Oct 6, 2024 1:24 AM

ಸಾರಾಂಶ

ಕಾರವಾರ ನಗರದ ರವೀಂದ್ರನಾಥ ಟಾಗೋರ ಕಡಲ ತೀರದ ಆದಾಯ ಪ್ರವಾಸೋದ್ಯಮ ಇಲಾಖೆಗೆ ಹೋಗುತ್ತಿದೆ. ತೀರಕ್ಕಾಗಿ ಖರ್ಚು ಮಾಡುವುದು ನಗರಸಭೆಯಾಗಿದೆ. ಹೀಗಾಗಿ ಆದಾರ ನಗರಸಭೆಗೆ ಬರಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾರವಾರ: ನಗರದ ರವೀಂದ್ರನಾಥ ಟಾಗೋರ ಕಡಲ ತೀರದ ಆದಾಯ ಪ್ರವಾಸೋದ್ಯಮ ಇಲಾಖೆಗೆ ಹೋಗುತ್ತಿದೆ. ತೀರಕ್ಕಾಗಿ ಖರ್ಚು ಮಾಡುವುದು ನಗರಸಭೆಯಾಗಿದೆ. ಇದು ಸರಿಯಲ್ಲ ಎಂದು ಇಲ್ಲಿನ ನಗರಸಭೆಯ ಸದಸ್ಯ ಸಂದೀಪ ತಳೇಕರ ಅಸಮಾಧಾನ ಹೊರಹಾಕಿದರು.

ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಡಲ ತೀರದಲ್ಲಿ ಸ್ವಚ್ಛತೆಗಾಗಿ ಇರುವ ಯಂತ್ರದ ಚಾಲಕನಿಗೆ ವೇತನ ನೀಡುವ ವಿಷಯ ಚರ್ಚೆಗೆ ಬಂದಾಗ ಮಾತನಾಡಿ, ಹಲವು ವರ್ಷದಿಂದ ಆದಾಯವನ್ನು ನಗರಸಭೆಗೆ ನೀಡಬೇಕು ಎಂದು ಠರಾವು ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಅಧ್ಯಕ್ಷ ರವಿರಾಜ ಅಂಕೋಲೇಕರ ಮಾತನಾಡಿ, ಜಿಲ್ಲಾಧಿಕಾರಿ ಅವರೊಂದಿಗೆ ಈ ಸಂಬಂಧ ಮಾತುಕತೆ ಮಾಡಲಾಗಿದೆ. ನಗರಸಭೆಗೆ ₹೨೧ ಲಕ್ಷ ಬರಬೇಕಿದ್ದು, ಅದನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ನಗರಸಭೆಯ ಸುಪರ್ಧಿಯಲ್ಲಿ ಇರುವ ಮಕ್ಕಳ ಉದ್ಯಾನದ ಬಳಿ ಸ್ಕೇಟಿಂಗ್ ಟ್ರ್ಯಾಕ್ ಮಾಡಲು ಶಾಸಕರು ಚಿಂತನೆ ನಡೆಸಿದ್ದಾರೆ. ಜತೆಗೆ ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಒವರ್ ಕೆಳಗೆ ಪೇ ಆ್ಯಂಡ್ ಪಾರ್ಕಿಂಗ್ ಮಾಡಲು ಅವಕಾಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಇದರಿಂದ ನಗರಸಭೆಗೆ ಆದಾಯ ಬರಲಿದೆ ಎಂದು ತಿಳಿಸಿದರು. ಕಡಲ ತೀರದ ಆದಾಯ ನಗರಸಭೆಗೆ ನೀಡುವಂತೆ ಠರಾವು ಮಾಡಲಾಯಿತು.

ಸದಸ್ಯ ಗಣಪತಿ ನಾಯ್ಕ ಮಾತನಾಡಿ, ನಗರದ ವಿವಿಧೆಡೆ ಗಾರ್ಡನ್ ನಿರ್ಮಾಣ ಮಾಡಲಾಗಿದ್ದು, ಇದಕ್ಕಾಗಿ ₹೪ ಕೋಟಿ ಖರ್ಚು ಮಾಡಲಾಗಿದೆ. ಆದರೆ, ಈಗ ನಿರ್ವಹಣೆ ಇಲ್ಲ. ೨೦೧೮ರಿಂದ ೨೦೨೦ರ ವರೆಗೆ ನಗರಸಭೆಯಲ್ಲಿ ೨ ಕೋಟಿ ಹಣ ಇತ್ತು. ಈಗ ಸಾಲದಲ್ಲಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಸಾಲವಾದ ಬಗ್ಗೆ ಹೇಳಿದಕ್ಕೆ ಸದಸ್ಯ ಡಾ. ನಿತಿನ ಪಿಕಳೆ ಅಸಮಾಧಾನ ಹೊರಹಾಕಿದರು. ಹಣವಿತ್ತು ಎಂದರೆ ಕೆಲಸ ಮಾಡಿಲ್ಲ ಎಂದು ಅರ್ಥವಾಗುತ್ತದೆ. ನಗರದಲ್ಲಿ ಅಭಿವೃದ್ಧಿ ಕೆಲಸವಾಗಿದ್ದರೆ ಹಣ ಉಳಿಯುತ್ತಿರಲಿಲ್ಲ ಎಂದು ಖಾರವಾಗಿ ನುಡಿದರು.

ಸದಸ್ಯ ಮಕ್ಬೂಲ್ ಶೇಖ್, ನೀರು ಪೂರೈಕೆ ಪೈಪ್‌ಲೈನ್‌ ದುರಸ್ತಿಗೆ ಲಕ್ಷಾಂತರ ಖರ್ಚು ಮಾಡಲಾಗಿದೆ ಎನ್ನುತ್ತಿದ್ದಂತೆ ಸಂದೀಪ ತಳೇಕರ ನೈಜವಾಗಿ ಆಗುವ ಖರ್ಚಿಗಿಂತ ಹೆಚ್ಚು ಹಣ ವೆಚ್ಚವೆಂದು ತೋರಿಸಲಾಗಿದೆ. ಬಾವಿಯಲ್ಲಿ ೨೭೮ ಕ್ಯೂಬಿಕ್ ಮೀಟರ ಹೂಳೆತ್ತಲಾಗಿದೆ ಎಂದು ನಮೂದಿಸಿದ್ದಾರೆ. ಇದು ೪೦ ಲೋಡ್ ಮಣ್ಣು ತೆಗೆದಿದ್ದಾರೆ ಎಂದು ಅರ್ಥವಾಗುತ್ತದೆ. ಒಂದು ಬಾವಿಯಲ್ಲಿ ಅಷ್ಟೊಂದು ಮಣ್ಣು ಸಿಗುತ್ತದೆಯೇ ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ರವಿರಾಜ ಅಂಕೋಲೇಕರ ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಈಚೆಗೆ ನಿಧನರಾದ ವಿಧಾನಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೇಟಿಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಪಾಧ್ಯಕ್ಷೆ ಪ್ರೀತಿ ಜೋಶಿ ಹಾಗೂ ಸದಸ್ಯರು ಇದ್ದರು.

ಸ್ಥಾಯಿ ಸಮಿತಿ ರಚನೆ ವೇಳೆ ಭಿನ್ನಮತ:

ಕಾರವಾರ ನಗರಸಭೆಯ ಸ್ಥಾಯಿ ಸಮಿತಿಯ ರಚನೆ ವೇಳೆ ಬಿಜೆಪಿಯ‌ ಸದಸ್ಯರಲ್ಲಿಯೇ ಭಿನ್ನಮತ ಉಂಟಾದ ಪ್ರಸಂಗ ನಡೆಯಿತು. ಗೊಂದಲ, ವಿರೋಧದ ನಡುವೆ ಬಿಜೆಪಿ ಬೆಂಬಲಿತ ಮಾಲಾ‌ ಹುಲಸ್ವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಲಾ ಹುಲಸ್ವಾರ್ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಅಧ್ಯಕ್ಷರಲ್ಲಿ ಕೇಳಿಕೊಂಡರು. ಈ ಸಂದರ್ಭದಲ್ಲಿ ಮಾಲಾ ಹುಲಸ್ವಾರ ಹಾಗೂ ಶಿಲ್ಪಾ ನಡುವೆ ವಾಗ್ವಾದ ನಡೆಯಿತು. ಸದಸ್ಯ ಉಲ್ಲಾಸ ಕೇಣಿ , ಮಾಲಾ ಹುಲಸ್ವಾರ ಅವರಿಗೆ ನೇರ ವಿರೋಧ ಮಾಡಿದ್ದರು. ಮಾಲಾ ಹೆಸರನ್ನು ಸ್ಥಾಯಿ ಸಮಿತಿ ಸದಸ್ಯತ್ವ ಪಟ್ಟಿಯಿಂದ ಕೈಬಿಡಿ ಎಂದು ಉಲ್ಲಾಸ ಹಾಗೂ ಶಿಲ್ಪಾ ಹೇಳಿದರು. ಆಗ ಮಾಲಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತಾವು ದಲಿತ ಸಮುದಾಯದ ಮಹಿಳೆಯಾಗಿದ್ದರಿಂದ ಅಧ್ಯಕ್ಷ ಸ್ಥಾನ ನೀಡಲು ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇದಕ್ಕೆ ಕಾಂಗ್ರೆಸ್ ಬಹು ಸದಸ್ಯರು ಬಿಜೆಪಿ ಸದಸ್ಯ ದಲಿತ ಸಮುದಾಯದ ಮಹಿಳೆ ಮಾಲಾ ಅವರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದರು.ಸಂಜೆ 6 ಗಂಟೆ ವರೆಗೂ ಆಯ್ಕೆ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿ ಅಧ್ಯಕ್ಷರು, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಗಲಾಟೆ ಸೃಷ್ಟಿಯಾಗಿತ್ತು. ಕೊನೆಗೂ ಮಾಲಾ ಅವರು ಗೆಲುವಿನ ನಗೆ ಬೀರಿದರು.

Share this article