ಒಬ್ಬ ಭ್ರಷ್ಟ ಹೋಗಿ, ಮತ್ತೊಬ್ಬ ಭ್ರಷ್ಟ ಬಂದರೆ ರಾಜ್ಯಕ್ಕೆ ಒಳ್ಳೆಯದಾಗದು

KannadaprabhaNewsNetwork |  
Published : Oct 04, 2025, 01:00 AM IST
ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು | Kannada Prabha

ಸಾರಾಂಶ

ಇಂದಿನ ಪರಿಸ್ಥಿತಿ ನೋಡಿದರೆ ಮುಖ್ಯಮಂತ್ರಿ ಬದಲಾವಣೆಯಾದರೂ ಪರಿಸ್ಥಿತಿ ಸುಧಾರಿಸಲ್ಲ. ಸರ್ಕಾರ ಬದಲಾದರೆ ಮಾತ್ರ ಸುಧಾರಿಸಬೇಕು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಒಬ್ಬ ಭ್ರಷ್ಟ ಹೋಗಿ, ಮತ್ತೊಬ್ಬ ಭ್ರಷ್ಟ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಒಳ್ಳೆಯದಾಗದು ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹರಿಹಾಯ್ದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಪರಿಸ್ಥಿತಿ ನೋಡಿದರೆ ಮುಖ್ಯಮಂತ್ರಿ ಬದಲಾವಣೆಯಾದರೂ ಪರಿಸ್ಥಿತಿ ಸುಧಾರಿಸಲ್ಲ. ಸರ್ಕಾರ ಬದಲಾದರೆ ಮಾತ್ರ ಸುಧಾರಿಸಬೇಕು. ಅವನು ಬಂದರೂ ಭ್ರಷ್ಟಾಚಾರ ಮಾಡುತ್ತಾನೆ. ಇವನು ಬಂದರೂ ಭ್ರಷ್ಟಾಚಾರ ಮಾಡುತ್ತಾರೆ. ಕಣ್ಣಿದ್ದು ಕುರುಡಾಗಿ, ಕಿವಿಯಿದ್ದು ಕಿವುಡಾಗಿದೆ ಸರ್ಕಾರ. ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂಬ ಜಪ ಶುರುವಾಗಿದೆ. ನೀವು ಯಾರು ಮುಖ್ಯಮಂತ್ರಿ ಎನ್ನುವುದು ಮುಖ್ಯವಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.

ಇನ್ನೆರಡು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಭ್ರಷ್ಟಾಚಾರಕ್ಕಾಗಿ ನೀವು ಮುಖ್ಯಮಂತ್ರಿ ಆಗಿದ್ದಿರಿ. ಪದೇ ಪದೇ ನಾನೇ ಸಿಎಂ ಎಂಬ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಹೈಕಮಾಂಡ್ ದುರ್ಬಲ ಆಗಿರುವ ಸಂಕೇತ. ಮೊದಲು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳುತ್ತಿದ್ದರು. ಈಗ ನಾನೇ ನಾನೇ ಸಿಎಂ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ. ಮೊದಲು ನಾನೇ ಎನ್ನುವವರ ಮೇಲೆ ಕ್ರಮ ಆಗುತ್ತಿತ್ತು. ಯಾರೇ ಮುಖ್ಯಮಂತ್ರಿ ಆದರೂ ಒಳ್ಳೆಯದಾಗುತ್ತದೆ ಎನ್ನುವ ವಿಶ್ವಾಸ ಇಲ್ಲ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಡಬಲ್‌ ಆಗಿದೆ ಎಂದು ಗುತ್ತಿಗೆದಾರರು ನಿಮಗೆ ಪತ್ರ ಬರೆದಿದ್ದಾರೆ. ಅದನ್ನು ಓದಿ ನಿಮಗೆ ನಾಚಿಕೆ ಅನಿಸಲಿಲ್ಲವೇ? ನೀವು ಬಂದ ಮೇಲೆ 60 ವಸ್ತುಗಳ ಬೆಲೆ ಏರಿಕೆ ಮಾಡಿದ್ದೀರಿ. ಈ ಬಗ್ಗೆ ನಿಮಗೆ ಪಟ್ಟಿ ಕೊಡಬೇಕಾ ಎಂದು ಪ್ರಶ್ನಿಸಿದರು. ಬೆಲೆ ಏರಿಕೆಯಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳಗಾವಿ, ವಿಜಯಪುರ, ರಾಯಚೂರು, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಅಪಾರವಾದ ಬೆಳೆ ಹಾನಿಯಾಗಿದೆ. ಈ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ‌ ಸಿಲುಕಿ ರೈತರು ಲಕ್ಷಾಂತರ ಬೆಳೆ ಹಾನಿಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರ ಮತ್ತು ಮಂತ್ರಿಗಳು ಸಂವೇದನೆ ಕಳೆದುಕೊಂಡಿದ್ದಾರೆ ಎಂದು ದೂಷಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯ ಚುನಾವಣೆ ಪ್ರತಿಷ್ಠೆ ಮುಖ್ಯವಾಗಿದೆ. ಎರಡು ತಿಂಗಳಿಂದ ಸಚಿವರು ಚುನಾವಣೆಯಲ್ಲಿ ಬ್ಯುಸಿ ಆಗಿದ್ದರು. ಅವರಿಗೆ ಚುನಾವಣೆಗೆ ದೊಡ್ಡದ್ದಾಗಿದೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆ ಆಲಿಸುವ ಸಂವೇದನೆ ಅವರಿಗಿಲ್ಲ. ಈಗಲಾದರೂ ಜಿಲ್ಲೆಯ ಸಚಿವರು ಸಂವೇದನೆ ತೋರಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸಿಎಂ ಸಿದ್ದರಾಮಯ್ಯ ಶನಿವಾರ ಬಿಮ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸುತ್ತಿರುವುದು ತಪ್ಪಲ್ಲ. ಆದರೆ, ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಿಂತ ಸಂಭ್ರಮಿಸುವುದು ನಿಮಗೆ ಮುಖ್ಯವಾಗಿದೆ ಎಂದು ಕಿಡಿಕಾರಿದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ