ಕನ್ನಡಪ್ರಭ ವಾರ್ತೆ ಬೆಂಗಳೂರು
ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಆಯುಕ್ತರು ಬಿಡುವಿಲ್ಲದೆ, ಅಧಿಕಾರಿಗಳ ಸಭೆಗಳನ್ನು ನಡೆಸಿ ಸಿಬ್ಬಂದಿಯನ್ನು ಕೆಲಸದಲ್ಲಿ ತೊಡಗಿಸಿದರೂ ಮಂಗಳವಾರದ ಸಂಜೆ ವೇಳೆಗೆ ಮರ, ಕೊಂಬೆಗಳ ತೆರವು ಕಾರ್ಯ ಇನ್ನೂ ಬಾಕಿ ಉಳಿದಿವೆ.
ನಗರದ ಹೃದಯಭಾಗದಲ್ಲಿರುವ ಓಕಳಿಪುರ ರೈಲ್ವೆ ಅಂಡರ್ ಪಾಸ್ ನಲ್ಲಿ ಕೊಳಚೆ ನೀರು ಇನ್ನೂ ರಸ್ತೆ ಮೇಲೆಯೇ ಹರಿದಾಡುತ್ತಿದೆ. ಕೆ.ಆರ್.ವೃತ್ತ ಹಾಗೂ ಸುತ್ತಮುತ್ತಲ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಆದರೂ, ಮತ್ತೊಂದು ಮಳೆ ಬಿದ್ದರೆ ಅದೇ ಸಮಸ್ಯೆ ಪುನರಾವರ್ತನೆಯಾಗುವ ಎಲ್ಲಾ ಮುನ್ಸೂಚನೆಗಳಿವೆ. ಅಗ್ನಿಶಾಮಕದಳದ ಸಿಬ್ಬಂದಿ, ನಗರ ಪಾಲಿಕೆ ಸಿಬ್ಬಂದಿ, ಖಾಸಗಿಯಾಗಿ ಬಾಡಿಗೆಗೆ ಪಡೆದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರೂ ತೆರವು ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.ಕ್ರೆಸೆಂಟ್ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಆರ್.ಆರ್.ನಗರ, ವಿಜಯನಗರ, ಯಶವಂತಪುರ, ಪೀಣ್ಯ ಸೇರಿದಂತೆ ಐದೂ ಪಾಲಿಕೆ ವ್ಯಾಪ್ತಿಗಳಲ್ಲಿ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿದರೂ ಅವುಗಳನ್ನು ಪಕ್ಕಕ್ಕೆ ಸರಿಸಲಾಗಿದೆ. ಹೊರತಾಗಿ ಮರಬಿದ್ದ ಸ್ಥಳದಿಂದ ಸಂಪೂರ್ಣ ತೆರವುಗೊಳಿಸಲು ಸಾಧ್ಯವಾಗಿಲ್ಲ.
ಬುಧವಾರ ಬಿದ್ದ ಆಲಿಕಲ್ಲು ಸಹಿತದ ರಭಸದ ಮಳೆಗೆ 516 ಮರಗಳು, 1305 ಕೊಂಬೆಗಳು ಬಿದ್ದು ನಗರದಾದ್ಯಂತ ಸಮಸ್ಯೆ ಸೃಷ್ಟಿಯಾಗಿತ್ತು. ಇವುಗಳಲ್ಲಿ ಒಂದು ವಾರದ ಅವಧಿಯಲ್ಲಿ 507 ಮರಗಳು, 1256 ಕೊಂಬೆಗಳನ್ನು ರಸ್ತೆಯಿಂದ ತೆರವುಗೊಳಿಸುವಲ್ಲಿ ಐದು ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಉಳಿದ 9 ಸ್ಥಳಗಳಲ್ಲಿ ಬಿದ್ದ ಮರಗಳು ಹಾಗೂ 49 ಮರದ ಕೊಂಬೆಗಳನ್ನು ಇನ್ನೂ ತೆರವುಗೊಳಿಸಲು ಸಾಧ್ಯವಾಗಿಲ್ಲ.
ಸಂಚಾರಕ್ಕೆ ಕಿರಿಕಿರಿ ನಗರದಲ್ಲಿ ಮಂಗಳವಾರ ಸಂಜೆ ತುಂತುರು ಮಳೆ ಸುರಿದ ಕಾರಣ ವಾಹನ ಸಂಚಾರ ಹಾಗೂ ಕಚೇರಿಗಳಿಂದ ಮನೆಗಳಿಗೆ ತೆರಳುವವರಿಗೆ ಕಿರಿಕಿರಿ ಉಂಟು ಮಾಡಿತ್ತು.