- 4 ದಿಕ್ಕುಗಳಲ್ಲೂ ರಸ್ತೆಗಳಿಗೆ ವಿವಿಧ ವಾಹನಗಳ ಅಡ್ಡಗಟ್ಟಿ ಹೋರಾಟಗಾರರ ಪ್ರತಿಭಟನೆ- - - ಕನ್ನಡ ಪ್ರಭವಾರ್ತೆ ಜಗಳೂರು
ಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ನಡೆಸಿದ ಸ್ವಯಂ ಪ್ರೇರಿತ ಬಂದ್ ಶಾಂತಯುತವಾಗಿ ಸಂಪೂರ್ಣಗೊಂಡಿತು. ಸಂಜೆ ಮಳೆರಾಯ ಆಗಮಿಸುವ ಮೂಲಕ ಬಂದ್‌ಗೆ ಯಶಸ್ವಿಯಾಗಿ ತೆರೆ ಎಳೆಯಲಾಯಿತು.ಜಗಳೂರು ಪಟ್ಟಣಕ್ಕೆ ಆಗಮಿಸುವ ನಾಲ್ಕು ದಿಕ್ಕುಗಳಲ್ಲಿ ಹೋರಾಟಗಾರರು ರಸ್ತೆಗಳಿಗೆ ವಿವಿಧ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ, ರಾಜ್ಯ ರೈತಸಂಘ, ಸಾಹಿತಿಗಳು, ಕರವೇ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಂಡಿದ್ದವು. ಸ್ವಯಂಪ್ರೇರಿತವಾಗಿ ವರ್ತಕರು ಅಂಗಡಿಗಳನ್ನು ಮುಚ್ಚಿದ್ದರು. ಯಾವುದೇ ವಹಿವಾಟು, ಜನರಿಲ್ಲದೇ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್ಸು, ಆಟೋಗಳ ಸಂಚಾರ ಸ್ಥಗಿತಗೊಂಡು ಬಸ್ ನಿಲ್ದಾಣದಲ್ಲಿ ಜನರು ಕಾಣಲಿಲ್ಲ. ವಿವಿಧ ಹಳ್ಳಿಗಳಿಂದ ಬಂದ ಜನರಿಗೆ ಸಂಚಾರಕ್ಕಾಗಿ ಪರದಾಡಿದರು.
ಭದ್ರಾ ನೀರಿಗಾಗಿ ಹೋರಾಟ ಅನಿವಾರ್ಯ:ಹೋರಾಟಗಾರ, ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ಕರೆ ನೀಡಿರುವ ಸ್ವಯಂಪ್ರೇರಿತ ಬಂದ್‌ಗೆ ಸಹಕರಿಸಿದ ಎಲ್ಲ ನಾಗರಿಕರಿಗೆ ಕೃತಜ್ಞತೆ. ನಾಯಕನಹಟ್ಟಿ ಚಿತ್ರದುರ್ಗ. ಹೊಳಲ್ಕೆರೆ, ಹಿರಿಯೂರು, ಸೇರಿದಂತೆ ಅನೇಕ ಕಡೆ ಸ್ವಯಂ ಪ್ರೇರಿತ ಬಂದ್ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಜಗಳೂರಿನಲ್ಲೂ ಬಂದ್ ಮಾಡಲು ದೊಣೆಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಪಟ್ಟಣ, ತಾಲೂಕಿನ ಸಂಘಟನೆಗಳು, ನಾಗರಿಕರು, ವರ್ತಕರು, ರೈತರು ಬೆಂಬಲ ಸೂಚಿಸಿ ಯಶಸ್ವಿಗೆ ಕಾರಣರಾಗಿದ್ದಾರೆ. ಶಾಸಕ ದೇವೇಂದ್ರಪ್ಪ ಅವರು ಕಾಮಗಾರಿ ವಿಳಂಬದ ಬಗ್ಗೆ ಸರ್ಕಾರ ಮಟ್ಟದಲ್ಲಿ ಒತ್ತಡ ತರುವ ಮೂಲಕ ಭದ್ರಾ ಮೇಲ್ದಂಡೆ ಕಾಮಗಾರಿ ನಡೆಯುವಂತೆ ಮಾಡಬೇಕು. ಇಲ್ಲವಾದರೆ ತೀವ್ರ ಹೋರಾಟ ಅನಿವಾರ್ಯ ಎಂದರು.
ಕೇಂದ್ರದಿಂದ ಅನುಧಾನ ಬಿಡುಗಡೆಆಗಿಲ್ಲ:ಶಾಸಕ ಬಿ.ದೇವೇಂದ್ರ ಮಾತನಾಡಿ ಭದ್ರಾ ನೀರಿಗಾಗಿ ಸ್ವಯಂಪ್ರೇರಿತ ಬಂದ್ ಯಶಸ್ವಿಯಾಗಿದೆ. ನಮ್ಮ ಸಹಕಾರ ಯಾವಾಗಲು ಇರುತ್ತದೆ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೇ.80ರಷ್ಟು ಪೈಪ್‌ಲೈನ್ ಕಾಮಗಾರಿ ಆಗಿದೆ. ಕೆಲವೇ ತಿಂಗಳಲ್ಲಿ ಮುಗಿಯಲಿದೆ. ₹1300 ಕೋಟಿ ಯೋಜನೆಯ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ರಾಜ್ಯ ಸರ್ಕಾರ ₹160 ಕೋಟಿ ಹಣ ಬಿಡುಗಡೆ ಮಾಡಿದೆ. ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಸಂಬಂಧ ಪಕ್ಷಬೇಧ ಮರೆತು, ಎಲ್ಲ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹತ್ತಿರ ನಿಯೋಗ ತೆರಳಿ, ಮುಂದಿನ ರೂಪುರೇಷೆಗಳನ್ನು ಮಾಡೋಣ ಎಂದು ಹೋರಾಟಗಾರರಿಗೆ ಅಭಯ ನೀಡಿದರು.
ರಾಜ್ಯ ಸರ್ಕಾರದ ನಿರ್ಲಕ್ಷ:ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ನಿಮ್ಮ ಹೋರಾಟಕ್ಕೆ ನಮ್ಮ ಸದಾ ಬೆಂಬಲವಿದೆ. ನಾವು ಶಾಸಕರಾಗಿದ್ದಾಗ 57 ಕೆರೆಗಳಿಗೆ ನೀರು, ಭದ್ರಾ ಮೇಲ್ದಂಡೆ ಯೋಜನೆಗೆ ಕೆಲಸಕ್ಕೆ ಚಾಲನೆ ನೀಡಿದ್ದೇವು. ಈಗಿನ ಸರ್ಕಾರ ಕಾಮಗಾರಿ ಬಗ್ಗೆ ನಿರ್ಲಕ್ಷೆ ತೋರಿದೆ ಎಂದು ಕಿಡಿಕಾರಿದರು.
ಈ ಸಂದರ್ಭ ಹೋರಾಟಗಾರ, ಡಾ.ಯಾದವ ರೆಡ್ಡಿ, ಡಾ.ಸಂಗೇನಹಳ್ಳಿ ಅಶೋಕಕುಮಾರ್, ಹೋರಾಟಗಾರರಾದ ಆರ್.ಓಬಳೇಶ್, ಪ್ರಾಂಶುಪಾಲ ಪ್ರೊ.ನಾಗಲಿಂಗಪ್ಪ, ವಾಲಿಬಾಲ್ ತಿಮ್ಮಾರೆಡ್ಡಿ, ಇಂದಿರಮ್ಮ ಸಿದ್ದಮ್ಮನಹಳ್ಳಿ, ಬಡಪ್ಪ, ಅನಂತರಾಜು, ಎಸ್ಎಫ್ಐ ಹೋರಾಟಗಾರ ಹೆಚ್.ಎಂ.ಹೊಳೆ ಮಹಲಿಂಗಪ್ಪ, ಕರವೇ ಅಧ್ಯಕ್ಷ ಮಹಾಂತೇಶ್, ಎನ್ಎ.ಸ್.ರಾಜು. ಮಲೆಮಾಚಿಕೆರೆ ಸತೀಶ್ ,ರಾಜಪ್ಪ, ಮಂಜಪ್ಪ,ರುದ್ರುಮುನಿ, ಐರಣಿಚಂದ್ರು, ಮೈಲೇಶ್ , ಕುಮಾರ್ , ಚಿರಂಜೀವಿ, ಲೋಕೇಶ್ ನಾಯ್ಕ್ , ಲುಕ್ಮಾನ್ , ಗಡಿಮಾಕುಂಟೆ ಬಸವರಾಜಪ್ಪ, ದುರುಗಮ್ಮ, ಚೌಡಮ್ಮ,ಸುಧಾ ಸೇರಿದಂತೆ ತಾಲ್ಲೂಕು ವಿವಿಧ ಸಂಘಟನೆಗಳ ಮುಖಂಡರುಗಳು ಬಂದ್ ನಲ್ಲಿ ಭಾಗವಹಿಸಿದ್ದರು.- - - -13ಜೆಎಲ್ಆರ್ಚಿತ್ರ1:
ಭದ್ರಾ ಮೇಲ್ದಂಡೆ, 57 ಕೆರೆ ತುಂಬುವ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ನಡೆಸಿದ ಸ್ವಯಂಪ್ರೇರಿತ ಬಂದ್ ಆಚರಣೆಯಲ್ಲಿ ಶಾಸಕ ದೇವೇಂದ್ರಪ್ಪ, ಹೋರಾಟಗಾರ ಗುರುಮೂರ್ತಿ ಇತರರು ಮಾತನಾಡಿದರು.