ವೀರಭದ್ರೇಶ್ವರ ಸ್ವಾಮಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯರ ಹಬ್ಬ । 5 ದಿನ ನಡೆದ ಉತ್ಸವ
ನಗರ ಹೊರವಲಯದ ಜಾಜೂರು ಗ್ರಾಮದಲ್ಲಿ 5 ದಿನಗಳ ಕಾಲ ಸತತವಾಗಿ ನಡೆದ ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯರ ಜಾತ್ರಾ ಮಹೋತ್ಸವ ಗುರುವಾರ ನೆರವೇರಿದ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಜಾಜೂರು ಸೇರಿದಂತೆ ಸುತ್ತಮುತ್ತಲಿನ ನಾಗತಿಹಳ್ಳಿ, ಹೆಂಜಗೊಂಡನಹಳ್ಳಿ, ಬೈರಗೊಂಡನಹಳ್ಳಿ, ಹೊಸಹಳ್ಳ, ಬೆಂಡೇಕೆರೆ, ಕಾಟೀಕೆರೆ, ಗೊಲ್ಲರಹಟ್ಟಿ, ಬಿ.ಜಿ.ತಾಂಡ್ಯ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.ಗುರುವಾರ ಬೆಳಿಗ್ಗೆ ಗ್ರಾಮ ದೇವತೆಗಳಾದ ಹೊನ್ನಾಲದಮ್ಮ ದೇವಿ ಹಾಗೂ ಅಮ್ಮಯ್ಯಜ್ಜಿ ದೇವಿಯರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ವೀರಭದ್ರೇಶ್ವರ ಸ್ವಾಮಿ, ಧೂತರಾಯ ಸ್ವಾಮಿ, ಹೊಸಪಟ್ಟಣ ಗ್ರಾಮದ ಧೂತರಾಯ ಸ್ವಾಮಿಯ ರಥಕ್ಕೆ ಪೂಜೆ ಸಲ್ಲಿಸಿ ರಥದ ಗಾಲಿಗಳಿಗೆ ತೆಂಗಿನ ಕಾಯಿಯ ಈಡುಗಾಯಿ ಸಮರ್ಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು,
ಬಿಸಿಲಿನ ತಾಪಕ್ಕೆ ದಣಿವರಿದ ಭಕ್ತರಿಗೆ ಕೆಲವು ಗ್ರಾಮಗಳ ಭಕ್ತರು ತಾವೇ ತಯಾರಿಸಿ ತಂದಿದ್ದ ತಂಪಾದ ಪಾನಕ ಮತ್ತು ಫಲಹಾರ ವಿತರಿಸಿದರು, ರಥೋತ್ಸವದ ನಿಮಿತ್ತ ಗ್ರಾಮದ ದೇವರಾದ ರಂಗನಾಥ ಸ್ವಾಮಿ, ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿ, ಪ್ಲೇಗಿನಮ್ಮ ದೇವಿ, ಹುತ್ತದಮ್ಮ ದೇವಿ, ಗಂಗಮ್ಮ ದೇವಿ ದೇಗುಲಗಳ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು, ಗುರುವಾರ ಬೆಳಿಗ್ಗೆ ಸಿಡಿ ಉತ್ಸವ ನಡೆಯಿತು.
ಏ.28 ರಿಂದ ಮೇ 2 ರ ವರೆಗೆ ನಡೆದ 5 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಗುರುವಾರ ನೆರವೇರಿದ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.