ಜಕಣಾಚಾರಿ ಶಿಲ್ಪಕಲೆಗೆ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ : ಸಂಸದ ಕೋಟ

KannadaprabhaNewsNetwork | Published : Jan 2, 2025 12:31 AM

ಸಾರಾಂಶ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯರು ಕರ್ನಾಟಕದಲ್ಲಿ ಶಿಲ್ಪಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯರು ಕರ್ನಾಟಕದಲ್ಲಿ ಶಿಲ್ಪಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬೇಲೂರು ಹಾಗೂ ಹಳೇಬೀಡು ದೇವಸ್ಥಾನಕ್ಕೆ ಅವರ ಶಿಲ್ಪಕಲೆಯ ಕೊಡುಗೆಯು ಅಪಾರವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಶೋಕಾಚರಣೆ ಹಿನ್ನೆಲೆ, ಸಾಂಕೇತಿಕವಾಗಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಜಕಣಾಚಾರಿ ಅವರ ಮಗ ಡಂಕಣಾಚಾರಿ ಕೂಡ ಶಿಲ್ಪಕಲೆಗೆ ಹೆಚ್ಚಿನ ಒತ್ತು ನೀಡಿದ್ದರು. ರಾಜ್ಯದ ಶಿಲ್ಪಕಲೆ ಕ್ಷೇತ್ರದಲ್ಲಿ ಜಕಣಾಚಾರಿ ಬಿಟ್ಟರೆ ಬೇರೆ ಯಾವ ಶಿಲ್ಪಿಯೂ ಅವರನ್ನು ಮೀರಿಸುವವರಿಲ್ಲ. ರಾಜ್ಯ ಸರ್ಕಾರವು ಶಿಲ್ಪಕಲೆಗೆ ಅತಿ ಹೆಚ್ಚು ಕೊಡುಗೆ ನೀಡುವ ಶಿಲ್ಪಿಗಳಿಗೆ “ಜಕಣಾಚಾರಿ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ ಎಂದರು.ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕನ್ನಡ ಶಿಲ್ಪಕಲೆಗೆ ಜಕಣಾಚಾರಿ ಅವರು ನೀಡಿದ ಕೊಡುಗೆ ಬಹುಮುಖ್ಯವಾಗಿದೆ.

ಕೈದಾಳ ದೇವಾಲಯದ ಶಿಲ್ಪಕಲೆ ಅದ್ಭುತವಾಗಿದ್ದು, ಅವರು ಕೊಟ್ಟಿರುವ ಕೊಡುಗೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ನಾಯಕ ವಿ.ಎ.ಆಚಾರ್ಯ ಹಾಗೂ ಕ.ಸಾ.ಪ.ದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕ.ಸಾ.ಪ ದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕ.ಸಾ.ಪ ಮಾಧ್ಯಮ ಕಾರ್ಯದರ್ಶಿ ನರಸಿಂಹಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ವೆಂಕಟೇಶ ಆಚಾರ್ಯ ವಂದಿಸಿದರು.

Share this article