ದೊಡ್ಡಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಅವಹೇಳನಕಾರಿ ಪದ ಪ್ರಯೋಗ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಈ ಕೂಡಲೇ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಬಿ.ಮುನೇಗೌಡ, ಕುಮಾರಸ್ವಾಮಿ ಅವರ ಮೈಬಣ್ಣವನ್ನು ನಿಂದಿಸಿ ವರ್ಣಭೇದ ನೀತಿಯನ್ನು ಜಮೀರ್ ಪೋಷಿಸಿದ್ದಾರೆ. ಇದು ಜನಾಂಗೀಯ ನಿಂದನೆಯೂ ಹೌದು. ಚೆನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಇಂತಹ ಕೀಳು ಮಟ್ಟದ ಪದ ಪ್ರಯೋಗ ಮಾಡಿರುವ ಸಚಿವರ ವಿರುದ್ದ ಚುನಾವಣಾ ಆಯೋಗ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಂತಹ ದುರಹಂಕಾರದ ವರ್ತನೆ ಮರುಕಳಿಸದಂತೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸಚಿವ ಸಂಪುಟದಿಂದ ಜಮೀರ್ ಅವರನ್ನು ಈ ಕೂಡಲೇ ವಜಾಗೊಳಿಸಬೇಕು ಎಂಬುದು ಪಕ್ಷದ ಹಕ್ಕೊತ್ತಾಯವಾಗಿದೆ. ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬವನ್ನು ಟೀಕಿಸುವುದೇ ಕೆಲವರಿಗೆ ಚಾಳಿಯಾಗಿದೆ. ಇಂತಹ ಹೊಣೆಗೇಡಿ ಕೃತ್ಯಗಳ ವಿರುದ್ದ ಹೋರಾಟ ನಮ್ಮದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯಕುಮಾರ್, ಜಿಪಂ ಮಾಜಿ ಸದಸ್ಯರಾದ ಎಚ್.ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಮುನೇಗೌಡ, ಯುವ ಘಟಕ ಜಿಲ್ಲಾಧ್ಯಕ್ಷ ಸುನಿಲ್‌ಕುಮಾರ್, ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಎನ್. ಮಲ್ಲೇಶ್, ಹಿರಿಯ ಸದಸ್ಯ ವಿ.ಎಸ್.ರವಿಕುಮಾರ್, ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ಸತೀಶ್, ಸಿದ್ದಪ್ಪ, ಜಗನ್ನಾಥಾಚಾರ್, ಅಂಚರಹಳ್ಳಿ ಆನಂದ್, ಕೆಂಪರಾಜು, ವಸಂತ್, ಹರೀಶ್, ಗೌರೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಫೋಟೋ-20ಕೆಡಿಬಿಪಿ1-
ಕೇಂದ್ರ ಸಚಿವ ಕುಮಾರಸ್ವಾಮಿ ಕುರಿತು ಜಮೀರ್ ಅಹ್ಮದ್ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಬೆಂ.ಗ್ರಾ. ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.